ನಮಸ್ತೆ ಪ್ರಿಯ ಓದುಗರೇ, ಇಂದಿನ ಲೇಖನದಲ್ಲಿ ಆರೋಗ್ಯಕರವಾದ ಹಾಗೂ ರುಚಿಕರವಾದ ಮೆಂತ್ಯ ಬಾತ್ ಮಾಡುವ ವಿಧಾನ ನೋಡೋಣ ಸ್ನೇಹಿತರೆ. ಈ ಬಾತ್ ತಿಂಡಿ ಅಥವಾ ಮಧ್ಯಾನದ ಲಂಚ್ ಬಾಕ್ಸ್, ಮಧ್ಯಾನದ ಭೋಜನ ಕ್ಕೆ ಚೆನ್ನಾಗಿ ಇರುತ್ತೆ. ಮೆಂತ್ಯ ಬಾತ್ ನೀವು ಮನೆಯಲ್ಲಿ ಮಾಡಿಯೇ ಇರ್ತೀರಾ ಆದರೆ ತಡ ಮಾಡದೆ ಇಂದು ಬ್ರಾಹ್ಮಣ ಶೈಲಿಯ ಬಾತ್ ಮಾಡುವ ವಿಧಾನ ನೋಡೋಣ. ಇದು ಬ್ರಾಹ್ಮಣರ ಶೈಲಿಯ ಅಡುಗೆ ಆದ್ದರಿಂದ ಇದರಲ್ಲಿ ನಾವು ಯಾವುದೇ ಈರುಳ್ಳಿ ಬೆಳ್ಳುಳ್ಳಿಯನ್ನು ಬಳಸುತ್ತಿಲ್ಲ. ತುಂಬಾ ಸರಳವಾಗಿ ಮಾಡಬಹುದಾದ ರೆಸಿಪಿ ಆಗಿದ್ದು ತುಂಬಾ ರುಚಿಯಾಗಿರುತ್ತದೆ. ಮೊದಲು ಗ್ಯಾಸ್ ಆನ್ ಮಾಡಿ ಒಂದು ದೊಡ್ಡ ಬಾಣಲೆ ಬಿಸಿಗಿಡಿ, ಬಾಣಲೆ ಬಿಸಿ ಆದ ನಂತರ 3 ಟೀ ಚಮಚದಷ್ಟು ಅಡುಗೆ ಎಣ್ಣೆ ಹಾಕಿ, ಎಣ್ಣೆ ಬಿಸಿ ಆದ ನಂತ್ರ ತಲಾ ಅರ್ಧರ್ಧ ಚಮಚ ಸಾಸಿವೆ, ಜೀರಿಗೆ ಹಾಕಿ, ಸಾಸಿವೆ ಜೀರಿಗೆ ಚಿಟಗುಟ್ಟಿದ ಮೇಲೆ ಹಿಂಗನ್ನು ಹಾಕಿ, ಯಾವುದೇ ಕಾರಣಕ್ಕೂ ಹಿಂಗು ಹಾಕುವುದನ್ನು ಮರೆಯಬೇಡಿ, ಯಾಕೆಂದರೆ ಈ ಹಿಂಗನ್ನೂ ಬಳಸುವುದರಿಂದ ಅಡುಗೆಗೆ ಅದ್ಭುತವಾದ ಪರಿಮಳ ಮತ್ತೆ ಘಮ ಕೊಡುತ್ತದೆ.

ಇವೆಲ್ಲ ಫ್ರೈ ಆದ ನಂತರ ಇದಕ್ಕೆ ಒಂದು ದೊಡ್ಡ ಗಾತ್ರದ ಆಲೂಗಡ್ಡೆಯನ್ನು ಕತ್ತರಿಸಿ ಹಾಕಿಕೊಳ್ಳಿ, ಇದನ್ನು ಚೆನ್ನಾಗಿ ಎಣ್ಣೆಯಲ್ಲಿಯೇ ಬೆಯುವ ಹಾಗೆ ಯಾವುದೇ ನೀರು ಹಾಕದೆ ಬೇಯಿಸಿ, ಒಂದುವೇಳೆ ಬೆಯುವುದಕ್ಕೆ ತುಂಬಾ ಸಮಯ ಹಿಡಿಯುತ್ತದೆ ಎಂದು ನಿಮಗೆ ಅನ್ನಿಸಿದರೆ ಸ್ವಲ್ಪ ಉಪ್ಪು ಉದುರಿಸಿ, ಉಪ್ಪು ಉದುರಿಸುವುದರಿಂದ ತರಕಾರಿಗಳು ಬೇಗ ಬೇಯುತ್ತವೆ. ನಂತರ ಒಂದು ಹಿಡಿಯಷ್ಟು ಹಸಿ ಬಟಾಣಿ ಕಾಳನ್ನು ಹಾಕಿರಿ. ಬಟಾಣಿ ಸ್ವಲ್ಪ ಬೇಯುತ್ತಿದ್ದ ಹಾಗೆ ಇದಕ್ಕೆ ಒಂದು ದೊಡ್ಡ ಬಟ್ಟಲಷ್ಟು ಮೆಂತ್ಯ ಸೊಪ್ಪನ್ನು ಚೆನ್ನಾಗಿ ತೊಳೆದು ಚಿಕ್ಕದಾಗಿ ಕತ್ತರಿಸಿ ಹಾಕಿಕೊಳ್ಳಿ, ಮೆಂತ್ಯ ಸೊಪ್ಪು ಹಾಕುವಾಗ ಬಹಳ ಅನ್ನಿಸಿದರೂ ಇದು ಬೆಂದ ನಂತರ ಸ್ವಲ್ಪವೇ ಆಗುತ್ತದೆ. ಈ ಬಾತನ್ನು ನೀವು ರಾತ್ರಿ ಉಳಿದ ಅನ್ನಕ್ಕೂ ಕಲಸಿ ಸವಿಯಬಹುದು. ಮಧ್ಯಾನದ ಊಟಕ್ಕೆ ತುಂಬಾ ರುಚಿಯಾಗಿರುತ್ತದೆ. ಸೊಪ್ಪು ಸ್ವಲ್ಪ ಬೆಂದ ಬಳಿಕ ಇದಕ್ಕೆ ಅರ್ಧ ಚಮಚ ಅರಿಶಿಣ ಪುಡಿ ಹಾಕಿ, ಅರಿಶಿನ ಹಾಕುವುದರಿಂದ ಸ್ವಲ್ಪ ಬೇಗ ಬೆಯುವುದರ ಜೊತೆಗೆ ಒಳ್ಳೆಯ ಬಣ್ಣವನ್ನೂ ಕೊಡಲು ಸಹಾಯ ಆಗುತ್ತದೆ. ಸೊಪ್ಪು ಬೆಯುವಷ್ಟರಲ್ಲಿ ಇದಕ್ಕೆ ಬೇಕಾದ ಮಸಾಲೆಯನ್ನು ತಯಾರಿಸಿಕೊಳ್ಳಹುದು.

ಒಂದು ಸಣ್ಣ ಮಿಕ್ಸಿ ಜಾರಿಗೆ ಅರ್ಧ ಬಟ್ಟಲು ತುರಿದ ಕೊಬ್ಬರಿ, ನಾಲ್ಕು ಹಸಿ ಮೆಣಸಿನ ಕಾಯಿ, ಒಂದು ಚಮಚ ಜೀರಿಗೆ, ಸ್ವಲ್ಪ ಕೊತ್ತಂಬರಿ ಸೊಪ್ಪು ಹಾಕಿ ನೀರನ್ನು ಸೇರಿಸದೆ ರುಬ್ಬಬೇಕು. ಇದು ಹಾಗೆ ರುಬ್ಬಲು ಕಷ್ಟವಾದರೆ ಸ್ವಲ್ಪ ಉಪ್ಪನ್ನು ಸೇರಿಸಿ ರುಬ್ಬುವುದರಿಂದ ಉಪ್ಪು ನೀರು ಬಿಟ್ಟು ಬೇಗ ರಬ್ಬಲು ಸಹಾಯ ಮಾಡುತ್ತೆ. ಇದನ್ನು ನುಣ್ಣಗೆ ರುಬ್ಬುವ ಅವಶ್ಯಕತೆ ಇಲ್ಲ, ನುಚ್ಚಾಗಿ ರುಬ್ಬಿದರೂ ಸಾಕು. ಈಗ ಬೆಂದಿರುವ ಆಲೂಗೆಡ್ಡೆ, ಬಟಾಣಿ, ಮಾಂತ್ಯ ಸೊಪ್ಪು ಇರುವ ಬಾಣಲೆಗೆ ಈ ಮಸಾಲೆಯನ್ನು ಹಾಕಿ ಕೊಬ್ಬರಿಯ ಹಸಿ ವಾಸನೆ ಹೋಗುವ ವರೆಗೂ ಚೆನ್ನಾಗಿ ಫ್ರೈ ಮಾಡಿ. ಇದು ಫ್ರೈ ಆಗುತ್ತಿದ್ದ ಹಾಗೆ ಉಪ್ಪನ್ನು ಸೇರಿಸಿ. ಮೊದಲಿಗೆ ಉಪ್ಪನ್ನು ಬಳಸಿದಲ್ಲಿ ಉಪ್ಪನ್ನು ನೋಡಿ ಸೇರಿಸಿ. ಕೊನೆಗೆ ಇದಕ್ಕೆ ಊದುರಾಗಿ ಮಾಡಿದ ಅನ್ನವನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಕೊಡಿ. ನೀವು ಹಬ್ಬದ ವೇಳೆ ಯಾವಾಗಲೂ ಮಾಡುವ ಚಿತ್ರನ್ನದ ಬದಲು ಮಾಡಿ ಕೊಟ್ಟರೆ ಮನೆ ಮಂದಿಯೆಲ್ಲ ಸಂತೋಷದಿಂದ ಊಟ ಮಾಡಿ ತೃಪ್ತರಾಗುತ್ತಾರೆ. ಇದನ್ನು ಬೇಕಾದರೆ ಟೊಮೆಟೊ ಸಾಸ್ ಜೊತೆ ಸೇರಿ ತಿನ್ನಬಹುದು. ತುಂಬಾ ರುಚಿ ಕೊಡುತ್ತದೆ. ಹಾಗಾದರೆ ನೋಡಿದೀರಲ್ಲ ರುಚಿ ರುಚಿಯಾದ ಸರಳವಾಗಿ ತಯಾರಾಗುವ ಬ್ರಾಹ್ಮಣ ಶೈಲಿಯ ಮೆಂತ್ಯ ಬಾತ್. ಈ ರೆಸಿಪಿ ಇಷ್ಟ ಆಗಿದ್ದರೆ ದಯವಿಟ್ಟು ತಪ್ಪದೇ ಶೇರ್ ಮಾಡಿ ಲೈಕ್ ಮಾಡಿ. ಶುಭದಿನ.

Leave a Reply

Your email address will not be published. Required fields are marked *