ಸೂರ್ಯಕಾಂತಿ ಇದು ಭಾರತ ದೇಶದ ವಾಣಿಜ್ಯ ಬೆಳೆಯಾಗಿದೆ. ಇದು ವಾರ್ಷಿಕ ಗಿಡವಾಗಿದ್ದು ಎರಡರಿಂದ ಹದಿನೈದು ಅಡಿ ಎತ್ತರ ಬೆಳೆಯುತ್ತದೆ. ಬಂಗಾರದ ಬಣ್ಣದ ಹೂಗಳು ಸದಾ ಸೂರ್ಯನೆಡೆಗೆ ತಿರುಗಿಕೊಂಡು ಸೂರ್ಯನಿಗಾಗಿಯೇ ತಾವು ಬದುಕಿರುವುದು ಎಂಬಂತಿರುತ್ತವೆ. ಸೂರ್ಯಕಾಂತಿಯನ್ನು ರೈತರು ಎಣ್ಣೆಕಾಳಿಗಾಗಿಯೇ ಬೆಳೆಯುತ್ತಾರೆ. ಸೂರ್ಯಕಾಂತಿ ಬೀಜದಲ್ಲಿ ತೇವಾಂಶ, ಪ್ರೊಟೀನ್, ಕೊಬ್ಬು, ನಾರಿನಂಶ, ಪೊಟ್ಯಾಶಿಯಂ, ಕ್ಯಾಲ್ಸಿಯಂ, ರಂಜಕ, ಮೆಗ್ನೇಷಿಯಂ, ಗಂಧಕ, ಸೋಡಿಯಂ, ಸಿಲಿಕಾ, ಕಬ್ಬಿನಾಂಶ, ಅಲ್ಯೂಮಿನಿಯಂ, ಅಯೋಡಿನ್, ಮ್ಯಾಂಗನೀಸ್,ತಾಮ್ರ ಮತ್ತು ಸತುವಿನ ಅಂಶಗಳಿರುತ್ತವೆ. ಅಡುಗೆ ಎಣ್ಣೆಗೆ ಅತಿ ಹೆಚ್ಚಾಗಿ ಬಳಸುತ್ತಾರೆ.

ಸೂರ್ಯಕಾಂತಿಯ ಬೀಜದಲ್ಲಿ ಅಧಿಕ ತೈಲಾಂಶವಿದೆ. ಬೀಜಗಳನ್ನು ಹಸಿಯಾಗಿ ಇಲ್ಲವೇ ಹುರಿದು ಇಲ್ಲವೇ ಉಪ್ಪು ಸಿಂಪಡಿಸಿ ತಿನ್ನುತ್ತಾರೆ. ಅಮೇರಿಕಾದಲ್ಲಿ ಬಟಾಣಿ ಕಾಳಿನಂತೆ ಸೂರ್ಯಕಾಂತಿಯ ಬೀಜಗಳನ್ನು ಹುರಿದು ಉಪ್ಪು ಬೆರೆಸಿ ಪ್ಯಾಕೆಟ್ ನಲ್ಲಿಟ್ಟು ಮಾರುತ್ತಾರೆ. ಹುರಿದ ಸೂರ್ಯಕಾಂತಿ ಬೀಜಗಳಿಂದ ಪುಡಿ ತಯಾರಿಸಿ ಅದರಿಂದ ಕಾಫಿಗೆ ಬದಲಿ ಪಾನೀಯವಾಗಿ ತಯಾರಿಸಿ ಕುಡಿಯುತ್ತಾರೆ. ಅಲ್ಲದೆ ಈ ಬೀಜಗಳು ಹಸುಗಳಿಗೆ, ಕೋಳಿಗಳಿಗೆ, ಪಕ್ಷಿಗಳಿಗೆ ಉತ್ತಮ ಪೌಷ್ಟಿಕ ಆಹಾರವಾಗಿದೆ.

ಸೂರ್ಯಕಾಂತಿ ಎಣ್ಣೆಯನ್ನು ಅಡುಗೆಗಾಗಿ ಬಳಸಲಾಗುತ್ತದೆ. ಈ ಆಧುನಿಕ ಕಾಲದಲ್ಲಿಯಂತೂ ಜಹೀರ್ತಿನ ಪ್ರಭಾವದಿಂದ ಕೊಲೆಸ್ಟಾಲ್ ಅಂಶ ಕಡಿಮೆಯಿರುವುದೆಂಬ ಪ್ರಚಾರದಿಂದಾಗಿ ಸೂರ್ಯಕಾಂತಿ ಎಣ್ಣೆಗೆ ಬಹಳ ಬೇಡಿಕೆಯಿದೆ. ಬೀಜದಿಂದ ತಯಾರಿಸಿದ ಹಿಟ್ಟು ಬಹಳ ಪುಷ್ಟಿಕರವಾಗಿರುತ್ತದೆ. ಮೈದಾಹಿಟ್ಟಿನೊಂದಿಗೆ ಬೆರೆಸಿ ಬೇಕರಿ ತಿಂಡಿಗಳನ್ನು ತಯಾರಿಸಲು ಉಪಯೋಗಿಸಲಾಗುತ್ತದೆ.

ಚೇಳು ಕಚ್ಚಿದಾಗ ಸೂರ್ಯಕಾಂತಿ ಎಣ್ಣೆಯನ್ನು ಲೇಪಿಸುವುದರಿಂದ ಉರಿ,ನೋವು ಶಮನವಾಗುತ್ತದೆ. ಅಷ್ಟೇ ಅಲ್ಲದೆ ಸೂರ್ಯಕಾಂತಿಯ ಕಾಂಡವನ್ನು ಕಾಗದ ಮತ್ತು ಪ್ಲಾಸ್ಟಿಕ್ ತಯಾರಿಸಲು ಬಳಸಲಾಗುತ್ತದೆ.

Leave a Reply

Your email address will not be published. Required fields are marked *