ಪ್ರಪಂಚದಲ್ಲಿರುವ ಪ್ರತಿಯೊಂದು ವಸ್ತುವಿನಲ್ಲೂ ಕೂಡಾ ಒಂದು ವಿಶಿಷ್ಟ ಶಕ್ತಿಯಾಗಿ ಭಗವಂತ ತುಂಬಿದ್ದಾನೆ. ಕೃಷ್ಣ ಹೇಳುತ್ತಾನೆ ನಾನು ಇಡೀ ಜಗತ್ತಿನಲ್ಲಿ ತುಂಬಿರುವ ಅವ್ಯಕ್ತಮೂರ್ತಿ.ನನ್ನನ್ನು ಬಂದು ಸೇರುವವರು ಪುಣ್ಯಾತ್ಮರು ಜಗತ್ತಿನಲ್ಲಿ, ಜೀವನದ ಸಾಧನೆಯಲ್ಲಿ ಅತ್ಯಂತ ಶ್ರೇಷ್ಠವಾದ ಸಿದ್ಧಿ ಎಂದರೆ ಭಗವಂತನ ಸಾಕ್ಷಾತ್ಕಾರ, ಅದನ್ನು ಪಡೆದವರು ಮತ್ತೆ ಸಂಸಾರದ ಬಂಧದಲ್ಲಿ ಸಿಲುಕಿ ಒದ್ದಾಡುವ ಅಗತ್ಯವಿಲ್ಲ ಎನ್ನುತ್ತಾನೆ ಕೃಷ್ಣ.

ಸೃಷ್ಟಿಯ ಕೊನೆಯಲ್ಲಿ ಎಲ್ಲ ವಸ್ತುಗಳೂ ನನ್ನದೇ ಆದ ಮೂಲ ಪ್ರಕೃತಿಯನ್ನು ಸೇರುತ್ತವೆ, ಸೃಷ್ಟಿಯ ಮೊದಲಲ್ಲಿ ಮರಳಿ ಅವನ್ನು ನಾನು ನಿರ್ಮಿಸುತ್ತೇನೆ.ನನಗೆ ಶರಣು ಬಂದವರು ಯಾವುದೋ ಪಾಪದಿಂದ ಹೆಣ್ಣಾಗಿ, ವೈಶ್ಯರಾಗಿ, ಶೂದ್ರರಾಗಿ ಸಾಧನೆಯಿಂದ ವಂಚಿತರಾದರೂ ಹಿರಿಯ ನೆಲೆಯಾದ ನನ್ನನ್ನೆ ಪಡೆಯುತ್ತಾರೆ.

ಶಾಶ್ವತವಾದ ಆನಂದವನ್ನು ಪಡೆಯುವುದಕ್ಕೋಸ್ಕರ ನನ್ನನ್ನು ಆಶ್ರಯಿಸು ನನಗೆ ಶರಣಾಗು, ನಿನ್ನನ್ನು ಉದ್ಧಾರ ಮಾಡುವ ಹೊಣೆ ನನ್ನದು.ಭಗವಂತನ ಜ್ಞಾನ ನಮ್ಮೊಳಗೆ ದೃಢವಾಗಿ ಅಪರೋಕ್ಷವಾದಾಗ, ಹಿಂದೆ ಫಲಕಾಮನೆಯಿಂದ ಮಾಡಿದ ಎಲ್ಲಾ ಪಾಪಗಳನ್ನು ಆ ಜ್ಞಾನಾಗ್ನಿ ಸುಟ್ಟುಬಿಡುತ್ತದೆ ಎಂದು ಆದ್ದರಿಂದ ಜ್ಞಾನ ಎಲ್ಲಕ್ಕಿಂತ ಶ್ರೇಷ್ಠ.

ನಿಜವಾದ ಭಕ್ತರಿಗೆ ಭಗವಂತ ವಶನಾಗುತ್ತಾನೆ.ಜಗತ್ತಿನ ಸೃಷ್ಟಿಗೆ ಮೂಲ ಕಾರಣ, ಸೃಷ್ಟಿಯ ಕೊನೆಯಲ್ಲಿ ಈ ಜಗತ್ತು ನಾಶವಾಗಲು, ಮತ್ತು ಸೃಷ್ಟಿಯಿಂದ ಸಂಹಾರ ತನಕದ ಅವದಿಯಲ್ಲಿ ಸ್ಥಿತಿಗೆ ಮೂಲತಃ ಭಗವಂತನೇ ಕಾರಣ.ನಮಗೆ ಬುದ್ಧಿ, ಜ್ಞಾನ, ಅಸಮ್ಮೋಹ, ಕ್ಷಮಾ, ಸತ್ಯಂ, ದಮಃ-ಶಮಃ -ಎಲ್ಲವನ್ನು ಕೊಡುವವನು ಆ ಭಗವಂತ.

ಕೃಷ್ಣ ಹೇಳುತ್ತಾನೆ ನಿನಗೆ ಬುದ್ಧಿ ಕೊಡುವವನೂ ನಾನು, ಜ್ಞಾನ ಕೊಡುವವನೂ ನಾನು.ತಿಳಿದವರು ನಾನು ಎಲ್ಲದರ ಮೂಲಕಾರಣ, ನನ್ನಿಂದಲೆ ಎಲ್ಲವೂ ನಡೆಯುತ್ತಿದೆ ಎಂದರಿತು ಭಕ್ತಿಯಿಂದ ನನ್ನನ್ನು ಸೇವಿಸುತ್ತಾರೆ.ಅರಿವುಗಳಲ್ಲಿ ಅಧ್ಯಾತ್ಮದ ಅರಿವು ನಾನು ಎನ್ನುತ್ತಾನೆ ಕೃಷ್ಣ.

ಭಗವಂತನ ಸನ್ನಿಧಾನ ಸಜ್ಜನರಲ್ಲೂ ಇದೆ, ದುರ್ಜನರಲ್ಲೂ ಇದೆ ದೈತ್ಯರಿಗೆ ಬಲವನ್ನು ಕೊಡುವವನೂ ಭಗವಂತ.ಎಲ್ಲ ಗುಣಗಳ ನೆಲೆಯಾದ ನಾನೆ ಎಲ್ಲ ಜೀವಿಗಳ ಹೃದಯದಲ್ಲಿ ನೆಲೆಸಿರುವ ಅಂತರ್ಯಾಮಿ ನಾನೆ ಎಲ್ಲ ಜೀವಿಗಳ ಬುಡ, ನಡು ಮತ್ತು ಕೊನೆ.

ಭಗವಂತನನ್ನು ನಶ್ವರ ಎಂದು ಹೇಳುವವರನ್ನು ದೇವತೆಗಳು ಎಂದೂ ಪ್ರೀತಿಸುವುದಿಲ್ಲ ಅವರು ಮಾಡುವ ಯಜ್ಞ ಯಾಗಾದಿಗಳು ವ್ಯರ್ಥ.ಒಟ್ಟಿನಲ್ಲಿ ಅಧ್ಯಾತ್ಮ ಸಾಧನೆಯಲ್ಲಿ ಪಾರತ್ರಿಕವಾಗಿ ಅವರ ಯಾವ ಆಸೆಯೂ ನೆರವೇರುವುದಿಲ್ಲ.ಈ ಜಗತ್ತಿನ ಸೃಷ್ಟಿ ಸ್ಥಿತಿ ಸಂಹಾರ ನಿಯಮನ ಜ್ಞಾನ ಅಜ್ಞಾನ ಬಂಧ ಮೋಕ್ಷ ಎಲ್ಲವೂ ಭಗವಂತನಿಂದ.

ನಾನು ನಿನ್ನನ್ನು ಭಜನೆ ಮಾಡುತ್ತೇನೆ, ನೀನು ನನ್ನನ್ನು ಭಜನೆ ಮಾಡು.ರಾಗ ಭಯ ಕ್ರೋಧವನ್ನು ತೊರೆದವರು, ಎಲ್ಲೆಲ್ಲೂ ನನ್ನನ್ನೇ ಕಾಣುವವರು ನನಗೆ ಶರಣು ಬಂದವರು ಬಹಳ ಮಂದಿ ತಿಳಿವಿನ ತಪಸ್ಸಿನಿಂದ ತಿಳಿಗೊಂಡು ನನ್ನನ್ನು ಸೇರಿದ್ದಾರೆ.

ಧರ್ಮಕ್ಕೆ ಸೋಲಾಗುವ ಲಕ್ಷಣಗಳು ಪ್ರಾಂತೀಯವಾಗಿ ಕಂಡು ಬಂದಾಗ ಭಗವಂತ ತನಗೆ ಆತ್ಮೀಯರಾದವರನ್ನು ಭೂಮಿಗೆ ಕಳುಹಿಸುತ್ತಾನೆ, ಅವರು ಆಚಾರ್ಯಪುರುಷರಾಗಿ ಬಂದು ಸಮಾಜವನ್ನು ತಿದ್ದುತ್ತಾರೆ.ಇಂತಹ ವ್ಯವಸ್ಥೆ ಕೂಡಾ ಕುಸಿದು ತಾಮಸ ಶಕ್ತಿಗಳು ವಿಜೃಂಭಿಸಿದಾಗ, ಕೊನೆಯದಾಗಿ ಭಗವಂತ ಸ್ವಯಂ ಅವತಾರವೆತ್ತುತ್ತಾನೆ.

ಸಜ್ಜನರನ್ನು ಉಳಿಸಲೆಂದು, ಕೇಡಿಗರನ್ನು ಅಳಿಸಲೆಂದು, ಧರ್ಮವನ್ನು ನೆಲೆಗೊಳಿಸಲೆಂದು ಯುಗ ಯುಗದಲ್ಲೂ ಮೂಡಿಬರುತ್ತೇನೆ.ಯಾರು ಹೇಗೆ ನನ್ನನು ಸೇವಿಸುತ್ತಾರೆ ಅವರನ್ನು ಹಾಗೆಯೇ ನಾನು ಅನುಗ್ರಹಿಸುತ್ತೇನೆ ಓ ಪಾರ್ಥ, ಮನುಷ್ಯರು ಯಾವ ದಾರಿಯಲ್ಲಿ ಸಾಗಿದರೂ ಕಡೆಗೆ ನನ್ನೆಡೆಗೆಯೇ ಬರುತ್ತಾರೆ.

Leave a Reply

Your email address will not be published. Required fields are marked *