ವರ್ಷಕ್ಕೊಮ್ಮೆ ಸಿಗುವ ಸೀತಾಫಲ ಹಣ್ಣು ಸೇವನೆ ಮಾಡುವುದರಿಂದ ಅತ್ಯದ್ಭುತ ಆರೋಗ್ಯ ಪ್ರಯೋಜನಗಳನ್ನು ನಿರೀಕ್ಷೆ ಮಾಡಬಹುದು.ಹಣ್ಣುಗಳು ನಮ್ಮ ಆಹಾರ ಪದ್ಧತಿಯಲ್ಲಿ ಸೇರಿರಬೇಕು. ಏಕೆಂದರೆ ನೈಸರ್ಗಿಕ ರೂಪದಲ್ಲಿ ನಮ್ಮ ದೇಹಕ್ಕೆ ಸಿಗುವ ಎಲ್ಲಾ ಬಗೆಯ ಪೌಷ್ಟಿಕ ಸತ್ವಗಳು ಹಣ್ಣುಗಳಲ್ಲಿ ಇರುತ್ತವೆ. ಕಾಲಕಾಲಕ್ಕೆ ಸಿಗುವ ಎಲ್ಲಾ ಬಗೆಯ ಹಣ್ಣುಗಳನ್ನು ನಾವು ಸೇವನೆ ಮಾಡಬೇಕುಈಗ ಮಳೆಗಾಲ ಆಗಿರುವುದರಿಂದ ಸಿಗುವ ಇತರ ಬಗೆಯ ಹಣ್ಣುಗಳ ಜೊತೆಗೆ ಸೀತಾಫಲ ಹಣ್ಣುಗಳು ಕೂಡ ಹೇರಳವಾಗಿ ಸಿಗುತ್ತವೆ. ನಮ್ಮ ಆರೋಗ್ಯ ರಕ್ಷಣೆಯಲ್ಲಿ ವಿವಿಧ ಬಗೆಯ ಪ್ರಯೋಜನಗಳನ್ನು ಸೀತಾಫಲ ಹಣ್ಣುಗಳಿಂದ ನಾವು ನಿರೀಕ್ಷೆ ಮಾಡಬಹುದು. ಈ ಲೇಖನದಲ್ಲಿ ಸೀತಾಫಲ ಹಣ್ಣುಗಳ ಅದ್ಭುತ ಆರೋಗ್ಯ ಪ್ರಯೋಜನಗಳ ಬಗ್ಗೆ ತಿಳಿಸಿಕೊಡಲಾಗಿದೆ. ಸಾಮಾನ್ಯವಾಗಿ ವಯಸ್ಸಾದ ಮೇಲೆ ನಮಗೆಲ್ಲರಿಗೂ ದೃಷ್ಟಿದೋಷ ಎದುರಾಗುತ್ತದೆ. ನಾವು ಬೇಡವೆಂದರೂ ಕೂಡ ಇಂತಹ ಸಮಸ್ಯೆ ತಪ್ಪಿದ್ದಲ್ಲ. ಹಾಗೆಂದು ಇದನ್ನು ಅನುಭವಿಸಲೇಬೇಕು ಎಂದು ಯಾರು ಹೇಳಿಲ್ಲ.

ಈಗಲೇ ನಾವು ಎಚ್ಚರ ವಹಿಸಿದರೆ ಇಂತಹವೊಂದು ಸಮಸ್ಯೆಯಿಂದ ಭವಿಷ್ಯದಲ್ಲಿ ಪಾರಾಗಲು ಅನುಕೂಲವಾಗುತ್ತದೆ. ಕಣ್ಣುಗಳ ಆರೋಗ್ಯಕ್ಕೆ ಸಹಕಾರಿಯಾದ ಪೌಷ್ಟಿಕ ಸತ್ವಗಳು ಅಡಗಿರುವ ಆಹಾರಗಳನ್ನು ನಾವು ಈಗಿನಿಂದಲೇ ಸೇವನೆ ಮಾಡುವ ಅಭ್ಯಾಸ ಮಾಡಿಕೊಳ್ಳಬೇಕು. ಯಾವ ಆಹಾರ ಪದಾರ್ಥಗಳಲ್ಲಿ ವಿಟಮಿನ್ ಸಿ ಮತ್ತು ವಿಟಮಿನ್ ಎ ಅಂಶ ಹೆಚ್ಚು ಸಿಗುತ್ತದೆ ಅಂತಹ ಆಹಾರ ಪದಾರ್ಥಗಳಿಗೆ ನಮ್ಮ ಆಹಾರ ಪದ್ಧತಿಯಲ್ಲಿ ಮೊದಲಿನ ಸ್ಥಾನ ಕೊಡಬೇಕು.ನಿಮ್ಮ ಕಣ್ಣಿನ ದೃಷ್ಟಿಯನ್ನು ಅಭಿವೃದ್ಧಿ ಪಡಿಸುವಲ್ಲಿ ಸೀತಾಫಲ ಹಣ್ಣು ಪ್ರಮುಖ ಪಾತ್ರವಹಿಸುತ್ತದೆ. ಏಕೆಂದರೆ ಈ ಮೇಲಿನ ವಿಟಮಿನ್ ಅಂಶಗಳು ಇದರಲ್ಲಿ ಇರುವುದರ ಜೊತೆಗೆ ರಿಬೋಫ್ಲಾವಿನ್, ವಿಟಮಿನ್ ಬಿ2 ಅಂಶಗಳು ಕೂಡ ಆಗಿರುವುದರಿಂದ ಫ್ರೀ ರಾಡಿಕಲ್ ಅಂಶಗಳ ವಿರುದ್ಧ ಹೋರಾಡುವ ಆಂಟಿ ಆಕ್ಸಿಡೆಂಟ್ ರೂಪಗಳು ನಿಸರ್ಗದತ್ತವಾಗಿ ಈ ಹಣ್ಣುಗಳಲ್ಲಿ ಸಿಗುತ್ತವೆ. ನಿಮ್ಮ ಕಣ್ಣಿನ ಹಲವಾರು ಸಮಸ್ಯೆಗಳನ್ನು ಸುಲಭವಾಗಿ ಬಗೆಹರಿಸುವಲ್ಲಿ ಇವುಗಳ ಪಾತ್ರ ತುಂಬಾ ದೊಡ್ಡದು.

ಸೀತಾಫಲ ಹಣ್ಣುಗಳಲ್ಲಿ ತಾಮ್ರದ ಅಂಶ ಮತ್ತು ನಾರಿನ ಅಂಶ ಹೆಚ್ಚಿನ ಪ್ರಮಾಣದಲ್ಲಿ ಸಿಗುತ್ತದೆ ಎಂದು ಹೇಳುತ್ತಾರೆ. ಆರೋಗ್ಯಕರವಾದ ಜೀರ್ಣಾಂಗ ವ್ಯವಸ್ಥೆಯಲ್ಲಿ ಇದರ ಪಾತ್ರ ತುಂಬಾ ದೊಡ್ಡದು. ಮುಖ್ಯವಾಗಿ ನಾರಿನ ಅಂಶ ನಮ್ಮ ದೇಹದ ಜೀರ್ಣಾಂಗ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುತ್ತದೆ ಮತ್ತು ಮಲಬದ್ಧತೆ ಸಮಸ್ಯೆ ಎದುರಾಗದಂತೆ ನೋಡಿಕೊಳ್ಳುತ್ತದೆ. ಇದಕ್ಕೆ ಸಹಕಾರಿಯಾಗುವಂತೆ ಸೀತಾಫಲ ಹಣ್ಣುಗಳಲ್ಲಿ ಮ್ಯಾಗ್ನಿಷಿಯಂ ಅಂಶ ಕೂಡ ಇರುವ ಕಾರಣ ಅಜೀರ್ಣತೆ ಮತ್ತು ಮಲಬದ್ಧತೆ ಸಮಸ್ಯೆ ಮತ್ತು ಭಾರವಾದ ಆಹಾರ ಪದಾರ್ಥಗಳನ್ನು ಸೇವನೆ ಮಾಡಿದಾಗ ಉಂಟಾಗುವ ಹೊಟ್ಟೆ ಉಬ್ಬರ ಸಮಸ್ಯೆಗೆ ಕಡಿವಾಣ ಹಾಕಲು ಅನುಕೂಲವಾಗುತ್ತದೆ.

Leave a Reply

Your email address will not be published. Required fields are marked *