ನಮಸ್ತೆ ಪ್ರಿಯ ಓದುಗರೇ, ಕರ್ನಾಟಕ ಶಿಲ್ಪ ಕಲಾಕೃತಿಗಳ ತವರೂರು. ಇಲ್ಲಿ ಕಟ್ಟಿರುವ ದೇವಾಲಯಗಳು ಕೇವಲ ಭಕ್ತಿಯ ಪರಾಕಾಷ್ಠೆಯ ಸಂಕೇತ ಮಾತ್ರ ಅಲ್ಲ. ಅವು ನಮ್ಮ ವಾಸ್ತುಶಿಲ್ಪಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಎಷ್ಟೋ ಬಾರಿ ನಾವು ದೇವಾಲಯಗಳಿಗೆ ಹೋದಾಗ ಅಲ್ಲಿರೋ ಪ್ರಾಂಗಣದಲ್ಲಿ ಇರುವ ಕಲ್ಲು ಕಂಬಗಳನ್ನು ನೋಡಿರುತ್ತೇವೆ. ಅದ್ರಲ್ಲಿ ಇರುವ ಕಲಾ ಕೆತ್ತನೆಗಳನ್ನು ಕಣ್ಣು ತುಂಬಿಕೊಂಡು ಬರುತ್ತಿವಿ. ಆದ್ರೆ ನಾವು ಇಂದಿನ ಲೇಖನದಲ್ಲಿ ಪರಿಚಯಿಸುವ ದೇಗುಲದ ಪ್ರಾಂಗಣದಲ್ಲಿ ಇರುವ ಕಲ್ಲು ಕಂಬವನ್ನು ಕೇವಲ ಕೈಯಿಂದ ಮುಟ್ಟುವುದು ಮಾತ್ರವಲ್ಲ ಈ ಕಂಬವನ್ನು ಸಹ ಅಲ್ಲಾಡಿಸಬಹುದಂತೆ. ಹಾಗಾದ್ರೆ ಬನ್ನಿ ಈ ವಿಶಿಷ್ಟವಾದ ಕಂಬವನ್ನು ಹೊಂದಿರುವ ದೇವಾಲಯ ಯಾವುದು ಅಲ್ಲಿನ ವೈಶಿಷ್ಟ್ಯತೆ ಏನು ಎಂಬುದನ್ನು ಇವತ್ತಿನ ಲೇಖನದಲ್ಲಿ ತಿಳಿದುಕೊಳ್ಳೋಣ. ಅನೇಕ ಕೋಟೆ ಕೊತ್ತಲೆಗಳನ್ನು ಹೊಂದಿರುವ ಬೀದರ್ ಜಿಲ್ಲೆಯಲ್ಲಿ ಪುರಾತನವಾದ ವೀರಭದ್ರ ಸ್ವಾಮಿಯ ಈ ಪುಣ್ಯ ತಾಣವಿದು.

 

 

ಈ ದೇಗುಲವನ್ನು ಕ್ರಿಸ್ತ ಶಕ 725 ರಲ್ಲಿ ರಾಜ ರಾಂಚಂದ್ರ ನಿರ್ಮಿಸಿದರು ಎಂದು ಹೇಳಲಾಗುತ್ತದೆ. ಕಲ್ಲು ಮತ್ತು ಗಾರೆಯಿಂದ ನಿರ್ಮಿತವಾಗಿರುವ ದೇವಾಲಯ ಗೋಪುರ ಪ್ರಾಂಗಣ ಪ್ರದಕ್ಷಿಣಾ ಪಥ ಕಲ್ಯಾಣಿಯನ್ನು ಒಳಗೊಂಡಿದೆ. ದೇಗುಲದ ಮುಖ್ಯ ಗರ್ಭ ಗುಡಿಯಲ್ಲಿ ವೀರಭದ್ರ ಸ್ವಾಮಿಯನ್ನು ಪ್ರತಿಷ್ಠಾಪಿಸಲಾಗಿದೆ. ಈ ದೇವನ ಬಳಿ ಬಂದು ಏನನ್ನೇ ಬೇಡಿದರೂ ಇವೆಲ್ಲ ಸಿದ್ಧಿ ಆಗುತ್ತೆ ಎಂದು ಹೇಳಲಾಗುತ್ತದೆ. ದೇವಾಲಯದ ಆವರಣದಲ್ಲಿ ಇರುವ ಪ್ರಶಾಂತವಾದ ವಾತಾವರಣ ಮನದಲ್ಲಿ ಭಕ್ತಿಯ ಸಿಂಚನ ನೂರ್ಮಡಿ ಮಾಡುತ್ತೆ. ದೇಗುಲದ ಹೋದೆ ಎತ್ತರವಾಗಿದ್ದು ಗೋಪುರದ ಅನೇಕ ಬಗೆಯ ಉಬ್ಬು ಶಿಲ್ಪ ಕಲಾಕೃತಿಗಳನ್ನು ನೋಡಬಹುದು. ಈ ದೇಗುಲದ ವಿಶೇಷ ಏನು ಅಂದ್ರೆ ಇಲ್ಲಿರುವ ಕಂಬಗಳನ್ನು ಮುಟ್ಟಿ ಅಲ್ಲಾಡಿಸಬಹುದು ಎನ್ನುವುದು. ಬೇರೆ ಯಾವ ದೇಗುಲಗಳಲ್ಲಿ ನಾವು ಈ ರೀತಿಯ ಅಲ್ಲಾಡುವ ಕಂಬಗಳನ್ನು ನೋಡೋಕೆ ಸಾಧ್ಯ ಇಲ್ಲ. ಆದ್ರೆ ಈ ದೇಗುಲದಲ್ಲಿ ಅಂತಹ ಒಂದು ವಿಸ್ಮಯವನ್ನು ನೋಡಿ ಕಣ್ಣು ತುಂಬಿಕೊಳ್ಳಬಹುದು. ಅಲ್ಲದೆ ಇಲ್ಲಿನ ವಾಸ್ತುಶಿಲ್ಪಗಳು ಕಲಾ ಕುಸುರಿಗಳನ್ನು ನೋಡ್ತಾ ಇದ್ರೆ ಮೈ ಮನ ರೋಮಾಂಚನ ಆಗುತ್ತೆ. ಇನ್ನೂ ಶಿವನ ಹಣೆಯಿಂದ ಹುಟ್ಟಿದ ಈ ವೀರ್ಭದ್ರೇಶ್ವರನನ್ನು ಭಕ್ತಿಯಿಂದ ಪ್ರಾರ್ಥಿಸಿದರೆ ಶತ್ರು ಬಾಧೆ ದೂರ ಆಗುತ್ತೆ ಎಂದು ಹೇಳಲಾಗುತ್ತದೆ. ನಿತ್ಯ ನೂರಾರು ಮಂದಿ ಇಲ್ಲಿಗೆ ಭೇಟಿ ನೀಡಿ ಭಗವಂತನ ಬಳಿ ತಮ್ಮ ಕಷ್ಟಗಳಿಗೆ ಪರಿಹಾರವನ್ನು ಕಂಡುಕೊಳ್ಳುತ್ತಾರೆ.

 

 

ವೀರಭದ್ರ ಸ್ವಾಮಿ ನೆಲೆಸಿರುವ ಈ ಕ್ಷೇತ್ರದಲ್ಲಿ ಜನವರಿ ಅಥವಾ ಫೆಬ್ರವರಿ ತಿಂಗಳಲ್ಲಿ ಏಳು ದಿನಗಳ ಕಾಲ ಬೃಹತ್ ಜಾತ್ರಾ ಮಹೋತ್ಸವ ವನ್ನಾ ನಡೆಸಲಾಗುತ್ತದೆ. ಆ ಸಮಯದಲ್ಲಿ ಮರದ ಕಾಷ್ಟದಿಂದ ತಯಾರಾದ ರಥದಲ್ಲಿ ಸ್ವಾಮಿಯನ್ನು ಕುಳ್ಳಿರಿಸಿ ಮೆರವಣಿಗೆ ಮಾಡಲಾಗುತ್ತದೆ. ಈ ಸಮಯದಲ್ಲಿ ರಾಜ್ಯದ ಮೂಲೆ ಮೂಲೆಗಳಿಂದ ಭಕ್ತರು ಆಗಮಿಸಿ ಸ್ವಾಮಿಯ ಆಶೀರ್ವಾದ ಪಡೆಯುತ್ತಾರೆ. ನಿತ್ಯ ಪೂಜೆಗೊಳ್ಳುವ ಇಲ್ಲಿನ ವೀರಭದ್ರೇಶ್ವರ ಸ್ವಾಮಿಯನ್ನು ಬೆಳಿಗ್ಗೆ 7 ಗಂಟೆಯಿಂದ ಮಧ್ಯಾಹ್ನ 11 ಗಂಟೆವರೆಗೂ ಸಂಜೆ 4 ರಿಂದ 8 ಗಂಟೆ ವರೆಗೆ ದರ್ಶನ ಮಾಡಬಹುದಾಗಿದೆ. ಇಲ್ಲಿಗೆ ಬರುವ ಭಕ್ತಾದಿಗಳಿಗೆ ಉಚಿತ ಅನ್ನ ದಾಸೋಹ ವ್ಯವಸ್ಥೆ ಇರುತ್ತದೆ. ಭಕ್ತಾದಿಗಳು ತಮ್ಮ ಇಷ್ಟಾನುಸಾರ ದೇವರಿಗೆ ಪೂಜೆಯನ್ನು ಸಲ್ಲಿಸಬಹುದು. ಯಾತ್ರಾರ್ಥಿಗಳಿಗೆ ತಂಗಲು ಇಲ್ಲಿ ಕೊಠಡಿಗಳು ಇವೆ. ವೀರಭದ್ರ ಸ್ವಾಮಿ ನೆಲೆಸಿರುವ ಈ ಪುಣ್ಯ ಕ್ಷೇತ್ರವೂ ಬೀದರ್ ಜಿಲ್ಲೆಯ ಹುಮ್ಮಾಬಾದ್ ಎಂಬ ಪ್ರದೇಶದಲ್ಲಿ ಇದೆ. ಈ ಕ್ಷೇತ್ರವು ಗುಲ್ಬರ್ಗ ಇಂದ 63 ಕಿಮೀ, ಬಸವ ಕಲ್ಯಾಣದಿಂದ 23 ಕಿಮೀ, ಬೀದರ್ ಇಂದ 57 ಕಿಮೀ ದೂರದಲ್ಲಿದೆ. ಸಾಧ್ಯವಾದರೆ ನೀವು ಒಮ್ಮೆ ಭೇಟಿ ನೀಡಿ ಅಲ್ಲಿನ ವೈಶಿಷ್ಟ್ಯತೆ ತಿಳಿಯಿರಿ. ಶುಭದಿನ.

Leave a Reply

Your email address will not be published. Required fields are marked *