ಪರಶುರಾಮನ ಕೋಪಕ್ಕೆ ಹುಟ್ಟಿದ ಊರು ಮಂಗಳೂರು. ಇಲ್ಲಿ ರಾಜರ ಕಾಲದಿಂದಲೇ ನಿರ್ಮಿತವಾದ ಅನೇಕ ದೇವಸ್ಥಾನಗಳು ಪ್ರಸಿದ್ಧಿ. ಸುಂದರ ಕೆತ್ತನೆಗಳಿಂದ ನಿರ್ಮಿತವಾದ ದೇವಸ್ಥಾನಗಳು ಆಕರ್ಷಕ, ನಯನ ಮನೋಹರ. ಅವುಗಳ ಬಗೆಗಿನ ದಂತಕತೆಗಳು, ಐತಿಹ್ಯಗಳು ಇನ್ನೂ ರೋಚಕ. ಹಲವು ಪ್ರಸಿದ್ಧಿ ಪುಣ್ಯ ಕ್ಷೇತ್ರಗಳ ನೆಲೆಬಿಡಾಗಿರುವ ಇಡೀ ರಾಜ್ಯದಲ್ಲೇ ಹಲವು ಪ್ರಮುಖ ಹಾಗು ಪ್ರಸಿದ್ಧ ದೇವಾಲಯಗಳಿವೆ. ಇಲ್ಲಿನ ಇತಿಹಾಸ ಪ್ರಸಿದ್ಧ ಕ್ಷೇತ್ರಗಳಲ್ಲಿ ಕರಾವಳಿಯ ಕದ್ರಿ ಶ್ರೀ ಮಂಜುನಾಥೇಶ್ವರ ದೇವಾಲಯವು ಒಂದು. ಬನ್ನಿ ಇತಿಹಾಸ ಪ್ರಸಿದ್ಧ ದೇವಾಲಯದ ಬಗ್ಗೆ ತಿಳಿಯೋಣ.

ಕರ್ನಾಟಕದಲ್ಲಿ ಕರಾವಳಿ ಪ್ರದೇಶವೆಂದರೆ ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ ಕರಾವಳಿ ಕರ್ನಾಟಕ ಮಾತ್ರವಲ್ಲದೇವಿಶ್ವದ ಮನ್ನಣೆಯನ್ನು ಪಡೆದುಕೊಂಡಿರುವ ಹಿಂದೂ ಧಾರ್ಮಿಕ ಕ್ಷೇತ್ರಗಳನ್ನು ಹೊಂದಿರುವ ಪವಿತ್ರ ಭೂಮಿ. ಕದ್ರಿ ಮಂಜುನಾಥೇಶ್ವರ ದೇವಾಲಯವು ಮಂಗಳೂರಿನಲ್ಲಿರುವ ಅತ್ಯಂತ ಹಳೆಯ ದೇವಾಲಯವಾಗಿದೆ ಮತ್ತು ದೇವಾಲಯವನ್ನು 10ನೇ ಶತಮಾನದಲ್ಲಿ ನಿರ್ಮಿಸಲಾಗಿದೆ. ಈ ದೇವಾಲಯದಲ್ಲಿರುವ ಲಿಂಗವು ಉದ್ಭವ ಲಿಂಗವೆಂದು, ದೇವರ ತಲೆಯ ಮೇಲೆ ಎಷ್ಟು ನೀರನ್ನು ಸುರಿದರು ಸಹ ನೀರು ತಕ್ಷಣವೇ ಇಂಗಿಬಿಡುತ್ತದೆ. ಇದು ದಕ್ಷಿಣ ಭಾರತದಲ್ಲಿಯೆ ಅತ್ಯಂತ ಹಳೆಯ ಲಿಂಗವೆಂದು ತಿಳಿದು ಬರುತ್ತದೆ.

ಚಾರಿತ್ರಿಕ ಹಿನ್ನೆಲೆ: ದೇವಸ್ಥಾನದ ಬಗ್ಗೆ ಹೀಗೊಂದು ನಂಬಿಕೆಯಿದೆ. ಪರಶುರಾಮ ಸಹ್ಯಾದ್ರಿ ತಪ್ಪಲಿನಲ್ಲಿ ವಾಸಿಸುತ್ತಿದ್ದ. ಅಲ್ಲಿ ಕ್ರೂರಿಗಳಾಗಿದ್ದ ಕ್ಷತ್ರಿಯರನ್ನು ಪರಶುರಾಮ ನಾಶ ಮಾಡಿ ಭೂಮಿಯನ್ನು ಕಶ್ಯಪನಿಗೆ ದಾನ ಮಾಡಿದನಂತೆ. ನಂತರ ಪರಶುರಾಮ ಭಗವಂತ ಶಿವನನ್ನು ಪ್ರಾರ್ಥಿಸಿ, ವಾಸಿಸುವುದಕ್ಕೆ ನೆಲ ಕಲ್ಪಿಸುವಂತೆ ಪ್ರಾರ್ಥಿಸಿದ. ಪರಶುರಾಮನ ಭಕ್ತಿಗೆ ಮೆಚ್ಚಿದ ಶಿವ ಪ್ರತ್ಯಕ್ಷನಾಗಿ ಕದಲಿ ಕ್ಷೇತ್ರದಲ್ಲಿ ವಾಸಿಸುವುದಕ್ಕೆ ಅನುವು ಮಾಡಿಕೊಡುತ್ತಾನೆ. ಲೋಕೋದ್ಧಾರಕ್ಕಾಗಿ ಮಂಜುನಾಥನನ್ನು ಪ್ರತಿಷ್ಠಾಪಿಸಿ ಪೂಜಿಸುವಂತೆ ಶಿವ ಕೇಳಿಕೊಂಡನಂತೆ. ಶಿವನ ಆಜ್ಞೆಯಂತೆ ಪರಶುರಾಮ ಕೊಡಲಿಯನ್ನು ಸಮುದ್ರಕ್ಕೆ ಎಸೆದು ಭಕ್ತಿಯಿಂದ ಪ್ರಾರ್ಥಿಸಿದಾಗ ಶಿವ ಪಾರ್ವತಿ ಸಮೇತನಾಗಿ ಮಂಜುನಾಥನ ರೂಪದಲ್ಲಿ ಪ್ರತ್ಯಕ್ಷನಾದನಂತೆ. ಜಗದೋದ್ಧಾರಕನಾಗಿ ಮಂಜುನಾಥ ಕದ್ರಿಯಲ್ಲಿ ನೆಲೆನಿಂತ ಎಂಬುದನ್ನು ಇತಿಹಾಸ ಹೇಳುತ್ತದೆ.

ಮಂಗಳೂರಿನ ಕದ್ರಿ ದೇವಸ್ಥಾನಕ್ಕೆ ಬಂದವರು ದೇವಸ್ಥಾನದ ಹಿಂದಿರುವ ಸಪ್ತ ಕೆರೆಗೆ, ಅದರ ದಡದಲ್ಲಿರುವ ಅಶ್ವಥ ಕಟ್ಟೆ, ನಾಗದೇವರ ಕಟ್ಟೆಗೆ ಪ್ರದಕ್ಷಿಣೆ ಹಾಕದೇ ಬರುವುದಿಲ್ಲ. ಕೆರೆಯ ಪಾಶ್ರ್ವದಲ್ಲಿ ಅನಾದಿ ಕಾಲದಲ್ಲಿ ಋಷಿ, ಮುನಿಗಳೇ ಪ್ರತಿಷ್ಟಾಪಿಸಿದರು ಎಂದು ಹೇಳಲಾಗುವ ಶಿವನ ಲಿಂಗದ ಸಾನಿಧ್ಯವಿದೆ. ಅದರ ಎದುರಿಗೆ ಇರುವ ಪುಟ್ಟ ಗುಡಿಯಲ್ಲಿ ಅನೇಕ ಶಿವಲಿಂಗ ಮತ್ತು ದೇವರ ಮೂರ್ತಿಗಳಿವೆ. ಅಂತಹ ಕದ್ರಿ ದೇವಳದ ಜನ ಬಹಳ ಹಿಂದಿನಿಂದಲೂ ನಂಬಿಕೊಂಡು ಬಂದದ್ದು ಗೋಮುಖ ತೀರ್ಥ. ಗೋಮುಖ ತೀರ್ಥವನ್ನು ಸೇವಿಸಿದರೆ ಪುಣ್ಯ ಬರುತ್ತದೆ ಎನ್ನುವುದು ಒಂದು ನಂಬಿಕೆಯಾದರೆ ಅದೇ ತೀರ್ಥವನ್ನು ಚೆಂಬಿನಲ್ಲಿ ತೆಗೆದುಕೊಂಡು ಹೋಗಿ ಅದರ ಎದುರಿನಲ್ಲಿರುವ ಶಿವನ ಮೂರ್ತಿಗೆ ಅಭಿಷೇಕ ಮಾಡಿದರೆ ಮನದಲ್ಲಿ ಬಯಸಿರುವ ಕಾರ್ಯಗಳು ಈಡೇರುತ್ತವೆ ಎನ್ನುವುದನ್ನು ಭಕ್ತರು ಶ್ರದ್ದಾಭಕ್ತಿ.

ದೇವಸ್ಥಾನದಲ್ಲಿ ಮಚ್ಛೇಂದ್ರನಾಥ, ಗೊರಕನಾಥ, ಲೋಕೇಶ್ವರ ಮತ್ತು ಬುದ್ಧನ ವಿಗ್ರಹಗಳಿವೆ. ದೇವಸ್ಥಾನದ ಪಶ್ಚಿಮಕ್ಕೆ ದುರ್ಗಾದೇವಿ ದೇವಸ್ಥಾನ, ಉತ್ತರಕ್ಕೆ ಗಣಪತಿ ದೇವಸ್ಥಾನ ಇದೆ. ಪ್ರತಿದಿನ ಮಂಜುನಾಥನಿಗೆ ರುದ್ರಾಭಿಷೇಕ ನಡೆಯುತ್ತದೆ. ಕಾರ್ತಿಕ ಮಾಸದ ಎಲ್ಲಾ ಸೋಮವಾರದಂದು ಶತರುದ್ರಾಭಿಷೇಕದೊಂದಿಗೆ ವಿಶೇಷವಾಗಿ ಶಿವನ ಆರಾಧನೆಯನ್ನು ನೆರವೇರಿಸಲಾಗುತ್ತದೆ. ಕಾರ್ತಿಕ ಮಾಸ, ಅಮಾವಾಸ್ಯೆಯ ರಾತ್ರಿಯಂದು ದೇವಾಲಯದ ಒಳಗು ಮತ್ತು ಹೊರಗು ಮಣ್ಣಿನ ದೀಪಗಳನ್ನು ಹಚ್ಚಿ, ಮಂಜುನಾಥನನ್ನು ದೀಪಾವಳಿ ಕಟ್ಟೆಯವರೆಗೆ ಮೆರವಣಿಗೆ ಮಾಡಲಾಗುತ್ತದೆ.

ದೇವಸ್ಥಾನದ ವಿಳಾಸ: ಕದ್ರಿ ಮಂಜುನಾಥೇಶ್ವರ ದೇವಸ್ಥಾನ, ಕದ್ರಿ, ಮಂಗಳೂರು 575002 ದೇವಾಲಯ ತೆರೆಯುವ ಸಮಯ: ಎಲ್ಲಾ ದಿನಗಳಲ್ಲಿಯೂ ತೆರೆದಿರುತ್ತದೆ, ಬೆಳಿಗ್ಗೆ 5.40 ರಿಂದ ಮಧ್ಯಾಹ್ನ 1 ಗಂಟೆಯವರೆಗೆ, ಮಧ್ಯಾಹ್ನ 4 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ.

Leave a Reply

Your email address will not be published. Required fields are marked *