ಭಾರತದ ಸಾಂಪ್ರದಾಯಿಕ ಸಂಸ್ಕೃತಿಯಲ್ಲಿ ಬೇವಿಗೆ ಅಪಾರವಾದ ಪ್ರಾಮುಖ್ಯತೆ ನೀಡಲಾಗಿದೆ. ನಮ್ಮ ಹಿರಿಯರು ಮತ್ತು ಅಜ್ಜಿಯರು ಬೇವಿನ ಅನುಕೂಲತೆಗಳನ್ನು ಬಾರಿ ಬಾರಿ ಪುನರಾವರ್ತಿಸುವುದನ್ನು ಇಷ್ಟವಾಗದಿದ್ದರೂ ಕೇಳುತ್ತಲೇ ಬಂದಿದ್ದೇವೆ. ಬೇವಿನ ಮರದಲ್ಲಿ 130 ಕ್ಕೂ ಹೆಚ್ಚು ವಿಭಿನ್ನ ಜೈವಿಕವಾದ ಸಕ್ರಿಯ ಸಂಯುಕ್ತಗಳನ್ನು ಹೊಂದಿದೆ ಎಂದು ಹೇಳಲಾಗುತ್ತದೆ. ಮರದ ಪ್ರತಿಯೊಂದು ಭಾಗವೂ, ಅಂದರೆ, ಎಲೆಗಳು, ಕೊಂಬೆಗಳು, ತೊಗಟೆ, ಬೀಜಗಳು, ಬೇರು, ಹಣ್ಣುಗಳು ಅಥವಾ ಹೂವುಗಳಾಗಿರಲಿ, ಇವೆಲ್ಲವನ್ನೂ ಉರಿಯೂತ, ಸೋಂಕು ಜ್ವರ, ಚರ್ಮರೋಗ ಮತ್ತು ಹಲ್ಲಿನ ಕಾಯಿಲೆಗಳಿಂದ ಹಿಡಿದು ಅನೇಕ ಸಮಸ್ಯೆಗಳಿಗೆ ಸಾಂಪ್ರದಾಯಿಕವಾಗಿ ಆಯುರ್ವೇದ ಚಿಕಿತ್ಸೆಯಲ್ಲಿ ಬಳಸಲಾಗುತ್ತದೆ. ಬ್ಯಾಕ್ಟೀರಿಯಾ ನಿರೋಧಕ, ಸೂಕ್ಷ್ಮಜೀವಿ ನಿರೋಧಕ, ಉರಿಯೂತ ನಿವಾರಕ, ಆಂಟಿಆಕ್ಸಿಡೆಂಟ್, ನಂಜುನಿರೋಧಕ, ಮಲೇರಿಯಾ ನಿವಾರಕ, ಮತ್ತು ವೈರಸ್ ನಿವಾರಕ ಗುಣಲಕ್ಷಣಗಳಿಂದ ತುಂಬಿರುವ ಬೇವು ನಿಮ್ಮ ಎಲ್ಲಾ ಆರೋಗ್ಯ ಸಮಸ್ಯೆಗಳಿಗೆ ಬಹುತೇಕ ಪರಿಹಾರವಾಗಿದೆ.

ಹಿಂದಿನ ಸಂಪ್ರದಾಯವನ್ನು ಆಚರಿಸುವ ಜನರು ಇಂದಿಗೂ ಬೇವಿನ ಎಲೆಗಳ ಗೊಂಚಲನ್ನು ಬೀಸಣಿಗೆಯಂತೆ ಫ್ಲೂ-ಜ್ವರ ಪೀಡಿತ ರೋಗಿಯ ಆರೈಕೆಗೆ ಬಳಸುತ್ತಾರೆ ಹಾಗೂ ಗಾಳಿ ಒಳಬರುವ ಬಾಗಿಲು ಕಿಟಕಿಗಳಿಗೆ ಬೇವಿನ ಎಲೆಗಳ ತೋರಣವನ್ನು ಕಟ್ಟುತ್ತಾರೆ. ಈ ಎಲೆಗಳ ಮೂಲಕ ಹಾದು ಬರುವ ಗಾಳಿ ಬ್ಯಾಕ್ಟೀರಿಯಾ ಅಥವಾ ವೈರಸ್ ಗಳಿಂದ ಶುದ್ದೀಕರಣಗೊಂಡು ಆರೋಗ್ಯವನ್ನು ಕಾಪಾಡುತ್ತದೆ ಎಂದು ಇವರು ನಂಬಿಕೊಂಡು ಬಂದಿದ್ದಾರೆ. ಬೇವಿನ ಎಲೆಯು ಹಲವಾರು ಆರೋಗ್ಯ ಮತ್ತು ಚರ್ಮದ ಪ್ರಯೋಜನಗಳನ್ನು ಹೊಂದಿದೆ. ಇದನ್ನು ಅರೆದು ಲೇಪದ ರೂಪದಲ್ಲಿ ನೇರವಾಗಿ ಅಥವಾ ಕುದಿಸಿ ಚಹಾದ ರೂಪದಲ್ಲಿ ಅಥವಾ ಬೇವಿನ ಕಡ್ಡಿಯನ್ನು ಜಗಿಯುವುದರಿಂತಲೂ ಹಲವಾರು ಪ್ರಯೋಜನಗಳಿವೆ ಎಂದು ಅನಾದಿ ಕಾಲದಿಂದಲೂ ಜನರು ಕಂಡುಕೊಂಡಿದ್ದರು. ಎರಡು ಸಾವಿರ ವರ್ಷಗಳಿಂದ ಬೇವಿನ ಎಲೆ ಮಾಂತ್ರಿಕ ಎಂಬ ಖ್ಯಾತಿಯನ್ನು ಹೊಂದಿದೆ, ವಿಶೇಷವಾಗಿ ಆಗ್ನೇಯ ಏಷ್ಯಾದಲ್ಲಿ ಬೇವು ಬಳಕೆಯಲ್ಲಿದೆ, ಮತ್ತು ಈಗ ಇದು ನಿಧಾನವಾಗಿ ಪಶ್ಚಿಮ ದೇಶಗಳಲ್ಲಿಯೂ ಮಾನ್ಯತೆಯನ್ನು ಪಡೆಯುತ್ತಿದೆ.

ಆಯುರ್ವೇದವು ಪೀಳಿಗೆಗಳಿಂದಲೂ ಈ ಎಲೆಗಳನ್ನು ಸೇವಿಸುವುದರಿಂದ ಆಗುವ ಅನುಕೂಲಗಳನ್ನು ಪ್ರತಿಪಾದಿಸುತ್ತಾ ಬಂದಿದೆ. ಆಯುರ್ವೇದದ ಪ್ರಕಾರ, ರುಚಿಯಲ್ಲಿ ಕಹಿ ಮತ್ತು ಕಟುವಾಗಿರುವ ಬೇವಿನ ಎಲೆ, ನಮ್ಮ ವಾತ ಅಥವಾ ನರಸ್ನಾಯುಕ ಅಸ್ವಸ್ಥತೆಗಳನ್ನು ಸಮತೋಲನಗೊಳಿಸುವಲ್ಲಿ ವಿಶೇಷವಾದ ಮಹತ್ವ ಪಡೆದಿದೆ. ಇದು ನಮ್ಮ ರಕ್ತದಿಂದ ವಿಷವನ್ನು ಮತ್ತಷ್ಟು ತೆಗೆದುಹಾಕುತ್ತದೆ ಮತ್ತು ಕ್ಯಾನ್ಸರ್ ಕಾರಕ ಫ್ರೀ ರ್‍ಯಾಡಿಕಲ್ ಎಂಬ ಕಣಗಳ ಚಟುವಟಿಕೆಯನ್ನು ನಿಗ್ರಹಿಸುತ್ತದೆ. ಬೇವಿನ ಎಲೆಗಳನ್ನು ಅಗಿಯುವುದರಿಂದ ನಮ್ಮ ಕೂದಲನ್ನು ಪೋಷಿಸಬಹುದು ಮತ್ತು ತಲೆನೋವುಗಳಿಗೂ ಚಿಕಿತ್ಸೆ ನೀಡಬಹುದು.

Leave a Reply

Your email address will not be published. Required fields are marked *