ನಮಸ್ತೆ ಪ್ರಿಯ ಓದುಗರೇ, ಈಗ ಬಿಸಿಲು ಕಾಲ ಆದರೂ ಯುಗಾದಿ ಹತ್ತಿರ ಇರುವ ಕಾರಣ ಅಲ್ಲಲ್ಲಿ ಮಳೆ ಬರುತ್ತಾ ಇದೆ. ಅಂತಹ ಮಳೆ ಬರುತ್ತಿರುವಾಗ ಸಂಜೆ ಸಮಯದಲ್ಲಿ ಬರೀ ಟೀ ಕುಡಿಯುವುದಕ್ಕೆ ಮನಸೇ ಬರೋಲ್ಲ. ಟೀ ಜೊತೆಗೆ ಏನಾದರೂ ಸ್ನಾಕ್ಸ್ ಇದ್ರೆ ಚೆನ್ನ ಅಂತ ಅನ್ನಿಸುವುದು ಸಹಜ. ನನಗೂ ನಿಮ್ಮೆಲ್ಲರಿಗೂ ಈ ರೀತಿ ಅನ್ನಿಸಿಯೇ ಇರುತ್ತದೆ. ಈ ಬಿಸ್ಕತ್, ಇನ್ನಿತರೆ ಅಂಗಡಿಯ ಅಥವಾ ಬೇಕರಿಯ ತಿನಿಸುಗಳು ಅಷ್ಟು ಆರೋಗ್ಯಕ್ಕೆ ಒಳ್ಳೆಯದಲ್ಲ. ಹಾಗಾಗಿ ಸಂಜೆಯ ವೇಳೆಗೆ ಟೀ ಸಮಯಕ್ಕೆ ಅಂತ ಹೇಳಿ ಮಾಡಿಸಿರುವ ಒಂದು ಮೆಂತ್ಯ ಸೊಪ್ಪನ್ನು ಉಪಯೋಗಿಸಿ ಆರೋಗ್ಯದಾಯಕ ಹೊಸ ರೀತಿಯ ರುಚಿ ರುಚಿಯಾದ ಬಿಸಿ ಬಿಸಿಯಾದ ಸ್ನಾಕ್ಸ್ ಮಾಡುವುದನ್ನು ಇಂದಿನ ಲೇಖನದಲ್ಲಿ ನೋಡೋಣ ಸ್ನೇಹಿತರೆ. ಈ ಮೆಂತ್ಯ ಸೊಪ್ಪಿನ ಮಹತ್ವದ ಬಗ್ಗೆ ಅಥವಾ ಅದರ ಆರೋಗ್ಯಕ್ಕೆ ಸಂಭಂದಿಸಿದಂತೆ ಸಾಕಷ್ಟು ಉಪಯೋಗಗಳು ನಮಗೆ ನಿಮ್ಮೆಲ್ಲರಿಗೂ ತಿಳಿದೇ ಇದೆ. ಹಾಗಾಗಿ ಮೆಂತ್ಯ ಸೊಪ್ಪನ್ನು ಇಲ್ಲಿ ಮುಖ್ಯ ಪದಾರ್ಥವಾಗಿ ಬಳಸಿ ಈ ಸ್ನಾಕ್ಸ್ ಮಾಡುವ ವಿಧಾನ ತಿಳಿಯೋಣ ಬನ್ನಿ.

ಮೊದಲು ಒಂದು ದೊಡ್ಡ ಮಿಕ್ಸಿಂಗ್ ಬೌಲ್ ಗೆ ಒಂದು ಬಟ್ಟಲು ದಪ್ಪ ಅವಲಕ್ಕಿ ಅಥವಾ ನಿಮ್ಮ ಕಡೆ ತೆಳ್ಳನೆಯ ಅವಲಕ್ಕಿ ಇದ್ದರೆ ಅದನ್ನು ಶುದ್ಧಗೊಳಿಸಿ ತೆಗೆದುಕೊಳ್ಳಿ ಅದನ್ನು ಒಂದೆರಡು ಬಾರಿ ನೀರಿನಿಂದ ತೊಳೆಯಿರಿ. ಯಾಕೆಂದರೆ ಆ ಅವಲಕ್ಕಿ ಮಾರುಕಟ್ಟೆಯಿಂದ ಮನೆಗೆ ಬರುವಷ್ಟರಲ್ಲಿ ಅದೆಷ್ಟು ಧೂಳನ್ನು ಹೊತ್ತು ತಂಡಿರುತ್ತದೋ ಗೊತ್ತಿಲ್ಲ. ಹಾಗಾಗಿ ಚೆನ್ನಾಗಿ ತೊಳೆದು ನೀರನ್ನು ಬಸಿದು ಒಂದು ಮೂರು ಚಮಚದಷ್ಟು ನೀರನ್ನು ಹಾಕಿ ಅದು ನೆನೆಯಲು 10 ನಿಮಿಷ ಬಿಡಿ. ಅದು ನೆನೆಯುವಷ್ಟರಲ್ಲಿ ಒಂದು ಚಿಕ್ಕ ಜಾರ್ ನಲ್ಲಿ ಒಂದು ನಿಮ್ಮ ಖಾರಕ್ಕೆ ಅನುಗುಣವಾಗಿ 4-5 ಹಸಿ ಮೆಣಸಿನ ಕಾಯಿ, ಒಂದು ಚಮಚ ಕೊತ್ತುಂಬರಿ ಕಾಳು ಅಂದ್ರೆ ಅವೀಜ, ಅರ್ಧ ಚಮಚ ಜೀರಿಗೆ, 8-10 ಎಸಳು ಬೆಳ್ಳುಳ್ಳಿ. ಇವಿಷ್ಟನ್ನು ಸೇರಿಸಿ ತರಿ ತರಿಯಾಗಿ ರುಬ್ಬಿಕೊಳ್ಳಿ. ನಂತರ 10 ನಿಮಿಷ ಅದು ಚೆನ್ನಾಗಿ ನೆಂದಿದೆ ಅನ್ನಿಸಿದರೆ ಅದನ್ನು ಕೈಯಲ್ಲಿಯೇ ಚೆನ್ನಾಗಿ ಮಿದುಕಿ ಮೀದುಕಿ ಹಿಟ್ಟಿನ ರೀತಿ ಅವಲಕ್ಕಿಯನ್ನು ಮ್ಯಾಶ್ ಮಾಡಿರಿ. ಈಗ ಒಂದು ದೊಡ್ಡ ಹಿಡಿಯಷ್ಟು ಮೆಂತ್ಯ ಸೊಪ್ಪನ್ನು ಚೆನ್ನಾಗಿ ತೊಳೆದು ಚಿಕ್ಕದಾಗಿ ಕತ್ತರಿಸಿ ಅವಲಕ್ಕಿಯ ಬೌಲ್ ಗೆ ಸೇರಿಸಿ, ಈಗ ಕೆಲವು ಮಸಾಲೆ ಪದಾರ್ಥಗಳನ್ನು ಸೇರಿಸುವ ಸಮಯ.

ಮೊದಲನೆಯದಾಗಿ ಉದ್ದಕೆ ತೆಳುವಾಗಿ ಕತ್ತರಿಸಿದ ಈರುಳ್ಳಿ, ಮೊದಲೇ ಮಿಕ್ಸಿ ಮಾಡಿದ ಹಸಿ ಮೆಣಸಿನ ಕಾಯಿ ಪೇಸ್ಟ್, ಅರ್ಧ ಚಮಚ ಅಚ್ಚ ಖಾರದ ಪುಡಿ ಅದು ನಿಮ್ಮ ಖಾರಕ್ಕೆ ಅನುಗುಣವಾಗಿ ಬೆರೆಸಿಕೊಳ್ಳಿ. ಚಿಟಿಕೆ ಅರಿಶಿನ, ಒಂದು ಬಟ್ಟಲು ಕಡಲೆ ಹಿಟ್ಟು, ಕೊತ್ತುಂಬರಿ ಸೊಪ್ಪು, ಉಪ್ಪು, ಒಂದು ಚಮಚ ಬಿಳಿ ಎಳ್ಳು. ಎಳ್ಳನ್ನು ಸೇರಿಸುವುದರಿಂದ ರುಚಿ ಹೆಚ್ಚಾಗುತ್ತದೆ, ಒಂದು ಚಮಚ ಎಣ್ಣೆ ಹಾಕಿ ಕೈಯಲ್ಲಿ ಚೆನ್ನಾಗಿ ಕಲಸಿ. ಈಗ ರೆಡಿ ಆದ ಹಿಟ್ಟನ್ನು ಕೈಗೆ ಎಣ್ಣೆ ಹಚ್ಚಿಕೊಂಡು ಬಿಸ್ಕತ್ ರೂಪದಲ್ಲಿ ಸ್ವಲ್ಪ ದಪ್ಪಗೆ ದುಂಡಾಗಿ ರೆಡಿ ಮಾಡಿಕೊಳ್ಳಿ. ಕಟ್ಲೇಟ್ ಅಂತಿವಲ್ಲ ಆ ರೀತಿ ಮಾಡಿಕೊಳ್ಳಿ, ಅಥವಾ ಸ್ಟಿಕ್ಸ್ ತರಹ ವಡೆ ರೀತಿಯಲ್ಲಿ ಕೂಡ ನೀವು ತಯಾರಿಸಿಕೊಳ್ಳಬಹುದು. ಈ ತಯಾರಾದ ಕಟ್ಲೇಟ್ ಗಳನ್ನ ಹದವಾಗಿ ಮಧ್ಯ ಉರಿಯಲ್ಲಿ ಬಿಸಿಯಾದ ಎಣ್ಣೆಯಲ್ಲಿ ಒಂದೊಂದಾಗಿ ಬಿಟ್ಟು ಹೊಂಬಣ್ಣ ಬರುವ ಹಾಗೆ ಕರಿದರೆ ಬಿಸಿ ಬಿಸಿಯಾದ ಆರೋಗ್ಯಕರ ಮೆಂತ್ಯ ಸೊಪ್ಪು ಹಾಗೂ ಅವಲಕ್ಕಿ ಬಳಸಿ ಮಾಡಿದ ಕೆಟ್ಲೆಟ್ ಸವಿಯಲು ಸಿದ್ಧ. ಸಂಜೆಯ ವೇಳೆಗೆ ತಯಾರಿಸಿ ಮನೆ ಮಂದಿಯೆಲ್ಲ ಸಂತೋಷದಿಂದ ತಿನ್ನುತ್ತಾ ಟೀ ಸವಿಯುತ್ತಾ ಲೈಫ್ ನ ಎಂಜಾಯ್ ಮಾಡಿ. ಈ ರೆಸಿಪಿ ನಿಮಗೆ ಇಷ್ಟ ಆಗಿದ್ದರೆ ದಯವಿಟ್ಟು ನಿಮ್ಮ ಪ್ರೀತಿ ಪಾತ್ರರಿಗೆ ಶೇರ್ ಮಾಡಿ. ಶುಭದಿನ.

Leave a Reply

Your email address will not be published. Required fields are marked *