ನಮಸ್ತೆ ಪ್ರಿಯ ಓದುಗರೇ, ಓಂ ಆಕಾರದ ಸುಂದರವಾದ ಸಮುದ್ರ ತೀರ ಸಮುದ್ರದ ಅಲೆಗಳಲ್ಲಿ ಮಿಂದೆದ್ದು ಪುರಾಣ ಪ್ರಸಿದ್ಧ ಗೋಕರ್ಣ ನಾಥನ ದರ್ಶನ ಮಾಡುವುದೇ ಬದುಕಿನ ಭವ ಬಂಧಗಳು ದೂರವಾದಂತೆ. ಶಿವನ ಆತ್ಮ ಲಿಂಗವಿರುವ ಸನಿಹದಲ್ಲಿ ಬಾಲ ಗಣಪನ ಪುರಾತನ ದೇವಾಲಯ ಕೂಡ ಇದೆ. ಬನ್ನಿ ಇವತ್ತಿನ ಲೇಖನದಲ್ಲಿ ವಿಘ್ನ ನಿವಾರಕ ಆದ ಗಣೇಶನ ಆ ಆಲಯದ ಬಗ್ಗೆ ಒಂದಿಷ್ಟು ಮಾಹಿತಿಯನ್ನು ತಿಳಿದುಕೊಳ್ಳೋಣ. ಪರಮೇಶ್ವರನು ಮಹಾಬಲೇಶ್ವರನಾಗಿ ಭಕ್ತರನ್ನು ಪೋರೆಯುತ್ತಿರುವ ಈ ಕ್ಷೇತ್ರದ ಸಮೀಪದಲ್ಲಿ ವಿಘ್ನ ನಿವಾರಕನ ಒಂದು ಭವ್ಯವಾದ ಆಲಯ ಇದ್ದು, ಈ ಆಲಯವನ್ನು ಸುಮಾರು 3 ಅಥವಾ 4 ನೇ ಶತಮಾನದಲ್ಲಿ ಕನ್ನಡದ ಮೊದಲ ರಾಜ ವಂಶವಾದ ಕದಂಬರು ನಿರ್ಮಿಸಿದರು ಎಂಬ ಐತಿಹ್ಯ ಇದೆ. ಆ ಆಲಯದಲ್ಲಿ ಇರುವ ಗಣಪನ ಮೂರ್ತಿ 1.3 ಮೀಟರ್ ಎತ್ತರವಾಗಿದ್ದು, ಕಪ್ಪು ವರ್ಣದ ಶಿಲೆಯಲ್ಲಿ ಕೆತ್ತಿರುವ ಗಣೇಶನ ವಿಗ್ರಹವೂ ಅಗಲವಾದ ಆನೆಯ ತಲೆ, ವಿಶಾಲವಾದ ಕಿವಿಗಳು, ಡೊಳ್ಳು ಹೊಟ್ಟೆ, ಬಲ ಕೈಯಲ್ಲಿ ಕಮಲ ಎಡ ಕೈಯಲ್ಲಿ ಮೋದಕವನ್ನು, ಸೊಂಡಿಲಿನಿಂದ ತಿನ್ನುವ ಭಂಗಿಯಲ್ಲಿದೆ.. ಇಲ್ಲಿಗೆ ಬಂದು ಗಣೇಶನನ್ನು ಅರ್ಚಿಸಿದರೆ ಅಂದುಕೊಂಡ ಕಾರ್ಯಗಳು ನಿರ್ವಿಘ್ನವಾಗಿ ಸಾಗುತ್ತೆ ಎಂದು ಹೇಳಲಾಗುತ್ತದೆ.

ಪುರಾಣದ ಕಥೆಗಳನ್ನು ಪ್ರಕಾರ ರಾವಣನು ತನ್ನ ತಾಯಿಗೋಸ್ಕರ ಶಿವ ಲಿಂಗವನ್ನು ಕೈಲಾಸದಿಂದ ಪಡೆದುಕೊಂಡು ಬರುವಾಗ, ಮಾರ್ಗ ಮಧ್ಯದಲ್ಲಿ ಸೂರ್ಯ ದೇವನಿಗೆ ಆರ್ಗ್ಯ ಕೊಡಬೇಕಾದ ಸಮಯ ಬರುತ್ತದೆ. ಆದ್ರೆ ಆತ್ಮ ಲಿಂಗವನ್ನು ಕೆಳಗೆ ಇಡಬಾರದು ಎಂದು ಷರತ್ತು ಇರುವುದರಿಂದ ರಾವಣನು ಅಲ್ಲೇ ಇದ್ದ ಬಾಲ ವಟುವಿನ ಬಳಿ ತನ್ನ ಆತ್ಮ ಲಿಂಗವನ್ನು ಕೊಟ್ಟು ತಾನು ಬರುವ ವರೆಗೂ ಇದನ್ನು ಹಿಡಿದುಕೊಂಡು ಇರಬೇಕು ಎಂದು ಹೇಳ್ತಾನೆ. ವಟುವಿನ ರೂಪದಲ್ಲಿ ಇರುವ ಗಣೇಶನು ನಾನು ಮೂರು ಎಣಿಸುವುದರ ಒಳಗಾಗಿ ಬರಬೇಕು ಇಲ್ಲವೆಂದರೆ ಈ ಲಿಂಗವನ್ನು ಇಲ್ಲಿಯೇ ಇಟ್ಟುಬಿಡ್ತೇನೆ ಎಂಬ ಷರತ್ತನ್ನು ಹಾಕುತ್ತಾನೆ. ಈ ಷರತ್ತಿಗೆ ಒಪ್ಪಿ ರಾವಣನು ಅರ್ಘ್ಯ ಕೊಡೋದಕ್ಕೆ ಹೋಗುತ್ತಾನೆ. ಸಮಯ ಸಾಧಕನಾದ ಬಾಲ ಗಣೇಶನು ಮೂರು ಬಾರಿ ರಾವಣನ ಹೆಸರನ್ನು ಕರೆದು ಆತನು ಬರಲು ತಡ ಆಯಿತು ಎಂಬ ಕಾರಣದಿಂದ ಆತ್ಮ ಲಿಂಗವನ್ನು ಕೆಳಗೆ ಇಟ್ಟು ಬಿಡುತ್ತಾನೆ. ಈ ರೀತಿಯಾಗಿ ಆತ್ಮ ಲಿಂಗವು ಇಲ್ಲಿ ಸ್ಥಾಪನೆ ಆಗುತ್ತೆ. ಗಣೇಶನು ಆತ್ಮ ಲಿಂಗವನ್ನು ಈ ಕ್ಷೇತ್ರದಲ್ಲಿ ಉಳಿಸಿಕೊಳ್ಳುವ ಹಾಗೆ ಮಾಡಿದ ಎನ್ನುವ ಕಾರಣದಿಂದ ಮಹಾಬಲೇಶ್ವರ ದೇಗುಲದ ಈ ಗಣೇಶನ ಆಲಯವನ್ನು ನಿರ್ಮಿಸಲಾಯಿತು ಎಂದು ಹೇಳಲಾಗುತ್ತದೆ. ಅಲ್ಲದೆ ಈ ಗಣೇಶನನ್ನು ದರ್ಶನ ಮಾಡದೇ ಮಹಾಬಲೇಶ್ವರ ದೇವರನ್ನು ದರ್ಶನ ಮಾಡಿದರೆ ಆತ್ಮ ಲಿಂಗವನ್ನು ದರ್ಶನ ಮಾಡಿ ಪೂಜೆ ಮಾಡಿದ ಫಲ ಸಿಗೋದಿಲ್ಲ ಎಂಬ ಪ್ರತೀತಿ ಇದೆ.

ಹೀಗಾಗಿ ಗೋಕರ್ಣದ ಮಹಾಬಲೇಶ್ವರನನ್ನು ನೋಡುವ ಮುನ್ನ ಈ ದೇವನನ್ನು ದರ್ಶನ ಮಾಡುವ ಪರಿಪಾಠ ತಲತಲಾಂತರದಿಂದ ನಡೆದುಕೊಂಡು ಬಂದಿದೆ. ಕರ್ನಾಟಕದ ಅತ್ಯಂತ ಹಳೆಯ ಹಾಗೂ ಪುರಾತನವಾದ ಗಣೇಶನ ದೇವಾಲಯಗಳಲ್ಲಿ ಗೋಕರ್ಣದ ಈ ಗಣೇಶನ ದೇಗುಲವೂ ಒಂದಾಗಿದ್ದು. ನಿತ್ಯ ಮೂರು ಹೊತ್ತು ಇಲ್ಲಿನ ವಿಘ್ನ ನಿವಾರಕಗೆ ಪೂಜೆ ಮಾಡಲಾಗುತ್ತದೆ. ಇಲ್ಲಿರುವ ಗಣೇಶನನ್ನು ಬೆಳಿಗ್ಗೆ 6 ಗಂಟೆಯಿಂದ ಮಧ್ಯಾಹ್ನ 12.30 ರ ವರೆಗೆ ಸಂಜೆ 3 ರಿಂದ ರಾತ್ರಿ 9 ಗಂಟೆ ವರೆಗೆ ದರ್ಶನ ಮಾಡಬಹುದಾಗಿದೆ. ಸಂಕಷ್ಟ ಹರ ಚತುರ್ಥಿ, ಅಂಗಾರಕ ಸಂಕಷ್ಟಿ, ಗಣೇಶ ಚತುರ್ಥಿಯನ್ನು ಹಬ್ಬಗಳನ್ನು ಇಲ್ಲಿ ಅತ್ಯಂತ ವಿಧಿವತ್ತಾಗಿ ಆಚರಿಸಲಾಗುತ್ತದೆ. ಇಲ್ಲಿಗೆ ಬರುವ ಭಕ್ತಾದಿಗಳು ದೇವರಿಗೆ ಪಂಚಾಮೃತ ಅಭಿಷೇಕ, ಸುವರ್ಣ ಮತ್ತು ರಜತ ಹರಣ ಸೇವೆ, ಕುಂಕುಮಾರ್ಚನೆ, ಗರಿಕೆ ಸಮರ್ಪಣೆ, ಹಣ್ಣು ಕಾಯಿ ಸೇವೆಯನ್ನು ಮಾಡಿಸಬಹುದು. ಪುರಾಣ ಪ್ರಸಿದ್ಧ ಗಣೇಶನ ಈ ಆಲಯವು ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದ ಮಹಾಬಲೇಶ್ವರ ದೇಗುಲದಿಂದ ಸಮೀಪದಲ್ಲಿದೆ ಬೆಂಗಳೂರಿನಿಂದ 481 ಕಿಮೀ, ಮಂಗಳೂರಿನಿಂದ 231 ಕಿಮೀ, ಶಿವಮೊಗ್ಗದಿಂದ 211 ಕಿಮೀ, ಕಾರ್ವಾರದಿಂದ 61 ಕಿಮೀ ದೂರದಲ್ಲಿದೆ. ಗೋಕರ್ಣಕ್ಕೆ ರಾಜ್ಯದ ಹಲವಾರು ಭಾಗಗಳಿಂದ ಕರ್ನಾಟಕ ಬಸ್ ಸಾರಿಗೆ ಸೌಲಭ್ಯ ಇದ್ದು, ಗೋಕರ್ಣ ಉತ್ತಮವಾದ ರೈಲ್ವೇ ಸಂಪರ್ಕವನ್ನು ಹೊಂದಿದೆ. ಗೋಕರ್ಣಕ್ಕೆ ಹೋದಾಗ ಮರೆಯದೆ ಈ ಗಣೇಶನನ್ನು ದರ್ಶನ ಮಾಡಿ ಪುನೀತರಾಗಿ ಬನ್ನಿ. ಶುಭದಿನ.

Leave a Reply

Your email address will not be published. Required fields are marked *