ನಮಸ್ತೆ ಪ್ರಿಯ ಓದುಗರೇ, ನಮ್ಮ ನಾಡು ಅನೇಕ ಸಿದ್ಧಿ ಪುರುಷರ ತವರೂರು ಅದ್ರಲ್ಲೂ ಯೋಗಿಗಳು ತಪಸ್ಸನ್ನು ಆಚರಿಸಲು ಆಯ್ಕೆ ಮಾಡಿಕೊಳ್ಳುತ್ತಿದ್ದ ಗುಹೆಗಳು ಇಂದಿಗೂ ಪವಿತ್ರ ತಾಣಗಳು ಎನಿಸಿಕೊಂಡಿದೆ. ಬನ್ನಿ ಇವತ್ತಿನ ಲೇಖನದಲ್ಲಿ ಸಂಜೀವಿನಿ ಗಿಡಗಳಿಂದ ಸಂಪಥ್ಭರಿತವಾದ ಸಿದ್ಧರ ಬೆಟ್ಟವನ್ನು ದರ್ಶನ ಮಾಡಿ ಸಿದ್ದೇಶ್ವರ ನ ಕೃಪೆಗೆ ಪಾತ್ರರಾಗೊಣ. ಸಮುದ್ರ ಮಟ್ಟದಿಂದ ಸುಮಾರು 2650 ಅಡಿ ಎತ್ತರವಿರುವ ಸುಂದರವಾದ ಈ ಬೆಟ್ಟದ ಮೇಲೆ ಸಿದ್ದೇಶ್ವರ ಸ್ವಾಮಿಗಳ ಗದ್ದುಗೆ ಇದ್ದು, ಈ ಬೆಟ್ಟವನ್ನು ಸಿದ್ಧ ಗಿರಿ, ಸುವರ್ಣ ಗಿರಿ, ಸಿದ್ಧರ ಬೆಟ್ಟ ಎಂಬೆಲ್ಲ ಹೆಸರಿನಿಂದ ಕರೆಯಲಾಗುತ್ತದೆ. ದೊಡ್ಡ ದೊಡ್ಡ ಕಲ್ಲು ಬಂಡೆಗಳಿಂದ ಕೂಡಿದ ಈ ಬೆಟ್ಟದ ಮೇಲೆ ಸಿದ್ದೇಶ್ವರ ಸ್ವಾಮಿಗಳು ಸಮಾಧಿ ಆಗಿದ್ದು, ಅವರ ಸಮಾಧಿ ಮೇಲೆ ಶಿವ ಲಿಂಗವನ್ನು ಪ್ರತಿಷ್ಠಾಪಿಸಿ ಪೂಜಿಸಲಾಗುತ್ತದೆ. ಇಲ್ಲಿಗೆ ಬಂದು ಸ್ವಾಮಿಗೆ ಒಬ್ಬಟ್ಟನ್ನು ಒಪ್ಪಿಸುತ್ತೇವೆ ಎಂದು ಹರಕೆ ಹೊತ್ತರೆ ಸಕಲ ಇಷ್ಟಾರ್ಥಗಳು ಸಿದ್ಧಿ ಆಗುತ್ತೆ ಎಂದು ಹೇಳಲಾಗುತ್ತದೆ. ಅಲ್ಲದೆ ಶಿವ ಲಿಂಗದ ಮುಂದೆ ಒಂದು ಪುಟ್ಟದಾದ ಕೊಳ ಇದ್ದು, ಈ ಕೊಳವನ್ನು ಸುವರ್ಣಮುಖಿ ನದಿಯ ಉಗಮ ಸ್ಥಾನ ಎಂದು ಹೇಳಲಾಗುತ್ತದೆ.

ಇಲ್ಲಿ ಹರಿಯುವ ನೀರಿಗೆ ಅಪಾರ ಪ್ರಮಾಣದ ಔಷಧೀಯ ಗುಣಗಳು ಇದ್ದು, ಈ ನೀರಿನಿಂದ ಸ್ನಾನ ಮಾಡಿದರೆ ಅಥವಾ ಮೈಮೇಲೆ ಪ್ರೊಕ್ಷಿಸಿಕೊಂದರೆ ಸಕಲ ರೋಗಗಳು ದೂರವಾಗುತ್ತದೆ ಎನ್ನುವುದು ಇಲ್ಲಿಗೆ ಬಂದು ತೀರ್ಥ ಸ್ನಾನ ಮಾಡಿದ ಭಕ್ತರ ಮನದ ಮಾತಾಗಿದೆ. ಇನ್ನೂ ಈ ಕ್ಷೇತ್ರಕ್ಕೆ ಹಾಗೂ ರಾಮಾಯಣ ಕಾಲಕ್ಕೆ ಒಂದು ಬಿಡಿಸಲಾಗದ ನಂಟು ಇದ್ದು, ಇಲ್ಲಿನ ಪುರಾಣಗಳ ಪ್ರಕಾರ ಶ್ರೀರಾಮ ಲಕ್ಷ್ಮಣರು ರಾವಣನ ಜೊತೆ ಯುದ್ಧ ಮಾಡುವಾಗ ಯುದ್ಧದಲ್ಲಿ ಲಕ್ಷ್ಮಣ ಮೂರ್ಛೆ ಹೋಗುತ್ತಾನೆ ಆಗ ಹನುಮಂತನು ಸಂಜೀವಿನಿ ಪರ್ವತವನ್ನು ಎತ್ತಿಕೊಂಡು ಬರುತ್ತಾನೆ. ಹೀಗೆ ಆಂಜನೇಯ ಸಂಜೀವಿನಿ ಪರ್ವತವನ್ನು ಹೊತ್ತುಕೊಂಡು ಬರುವಾಗ ಆ ಪರ್ವತದ ಸಣ್ಣ ತುಣುಕು ಈ ಸಿದ್ಧರ ಬೆಟ್ಟದ ಮೇಲೆ ಬಿತ್ತು ಎಂದು ಪ್ರತೀತಿ ಇದೆ. ಹೀಗಾಗಿ ಈ ಕ್ಷೇತ್ರದಲ್ಲಿ ರೋಗಗಳನ್ನು ದೂರ ಮಾಡುವ ಸಂಜೀವಿನಿ ಸಸ್ಯಗಳು ಬೆಳೆಯುತ್ತವೆ ಎಂದು ಹೇಳಲಾಗುತ್ತದೆ. ಹೇರಳವಾದ ರಾಶಿಯನ್ನು ಹೊಂದಿರುವ ಇಲ್ಲಿನ ಘನ ಸಸ್ಯ ಬೇಧಗಳು ಭಾರತದಲ್ಲಿ ಮತ್ತೆಲ್ಲೂ ಕಾಣಲು ಸಾಧ್ಯವಿಲ್ಲ ಎನ್ನಲಾಗುತ್ತದೆ. ಈ ಕಾರಣದಿಂದ ಈ ತಪೋ ಕ್ಷೇತ್ರವನ್ನು ಕರ್ನಾಟಕ ಸಂಜೀವಿನಿ ಬೆಟ್ಟ ಎಂದು ಕರೆಯಲಾಗುತ್ತದೆ.

ಇಲ್ಲಿನ ಕಲ್ಲು ಬಂಡೆಗಳ ಗವಿ ಒಳಗಡೆ ರೇವಣ ಸಿದ್ದೇಶ್ವರ ರು, ಎಡೆಯೂರಿನ ಸಿದ್ದಲಿಂಗೇಶ್ವರ ರು, ಗೋಸಲ ಸಿದ್ದೇಶ್ವರರು, ಅಡವಿ ಸಿದ್ದೇಶ್ವರರು ಹೀಗೆ ಇನ್ನೂ ಅನೇಕ ಸಿದ್ಧಿ ಪುರುಷರು ತಪಸ್ಸನ್ನು ಆಚರಿಸಿದ್ದಾರೆ. ಹೀಗಾಗಿ ಈ ಕ್ಷೇತ್ರಕ್ಕೆ ಬಂದರೆ ಮನದಲ್ಲಿ ಇರುವ ಕಾರ್ಯಗಳು ಸಿದ್ಧಿ ಆಗುತ್ತವಂತ. ಶ್ರಾವಣ ಮಾಸ ಹಾಗೂ ಕಾರ್ತಿಕ ಮಾಸದಲ್ಲಿ ಸಿದ್ದೇಶ್ವರ ಸ್ವಾಮಿಗೆ ವಿಶೇಷ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಗುತ್ತದೆ. ಇಲ್ಲಿಗೆ ಬರುವ ಪ್ರತಿ ಭಕ್ತಾದಿಗಳಿಗೆ ಉಚಿತವಾದ ಅನ್ನ ದಾಸೋಹ ದ ವ್ಯವಸ್ಥೆ ಇದ್ದು, ಪ್ರತಿ ಸೋಮವಾರ ಸಿದ್ದೇಶ್ವರರಿಗೆ ರುದ್ರಾಭಿಷೇಕ ಮಾಡಲಾಗುತ್ತದೆ. ಮಹಾ ಮಹಿಮರ ತಪಸ್ಸನ್ನಾಚರಿಸಿ ದ ಈ ಜಾಗೃತ ಕ್ಷೇತ್ರ ಕ್ಕೇ ಬೆಳಗ್ಗೆ 6 ಸಂಜೆ 7 ಗಂಟೆ ವರೆಗೆ ಭೇಟಿ ನೀಡಬಹುದು. ಸಿದ್ಧರ ಬೆಟ್ಟ ತುಮಕೂರು ಜಿಲ್ಲೆಯ ತುಂಬಾಡಿ ಅಲ್ಲಿದೆ. ಈ ಜಾಗೃತ ಸ್ಥಳ ರಾಜಧಾನಿ ಬೆಂಗಳೂರಿನಿಂದ 160 ಕಿಮೀ, ಹಾಸನದಿಂದ 170 ಕಿಮೀ, ತುಮಕೂರಿನಿಂದ 32 ಕಿಮೀ, ತುಂಬಾಡಿ ಇಂದ 12 ಕಿಮೀ ದೂರದಲ್ಲಿದೆ. ಸಾಧ್ಯವಾದರೆ ಜೀವಮಾನದಲ್ಲಿ ಒಮ್ಮೆ ನೀವೂ ಕೂಡ ಹಚ್ಚ ಹಸಿರಿನಿಂದ ಕಂಗೊಳಿಸುವ ಈ ಪುಣ್ಯ ತಾಣವನ್ನು ದರ್ಶನ ಮಾಡಿ. ಶುಭದಿನ.

Leave a Reply

Your email address will not be published. Required fields are marked *