ಶ್ರೀ ಕ್ಷೇತ್ರ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನವು ಅತೀ ಪುರಾತನ ದೇವಾಲಯಗಳಲ್ಲಿ ಒಂದು. ಪುಳಿನ, ಪೊಳಲ್ ಎಂದರೆ ಮಣ್ಣು ಎಂಬ ಅರ್ಥದಿಂದ ಶ್ರೀ ದೇವಿಯ ಕ್ಷೇತ್ರಕ್ಕೆ ಪುಳಿನಾಪುರ, “ಪೊಳಲಿ” ಎಂಬ ಹೆಸರು ಬಂತು. ಪ್ರಧಾನ ದೇವತೆ ಶ್ರೀ ರಾಜರಾಜೇಶ್ವರೀ, ಎಡಗಡೆಯಲ್ಲಿ ಭದ್ರಕಾಳಿ, ಬಲಕಡೆಯಲ್ಲಿ ಶ್ರೀ ಸುಬ್ರಹ್ಮಣ್ಯ, ಶ್ರೀ ಮಹಾಗಣಪತಿ, ಬ್ರಹ್ಮವಟು, ವಿಷ್ಣುವಟು, ಶೂಲಿನಿ, ದಂಡಿನಿ, ಮುಂಡಿನಿ ಪರಿವಾರ ಗಣಗಳ ಸಾನಿಧ್ಯವು ಶ್ರೀ ಕ್ಷೇತ್ರದಲ್ಲಿದೆ.

ಶ್ರೀ ಕ್ಷೇತ್ರದ ಹೊರಾಂಗಣದ ಬಲಬದಿಯಲ್ಲಿ ಶ್ರೀ ದುರ್ಗಾಪರಮೇಶ್ವರೀ ದೇವಿಯ ಗುಡಿಯಿದ್ದು ಸುಮೇಧಮುನಿಯು ಪ್ರತಿಷ್ಟಾಪಿಸಿದನೆಂದು ಪುರಾಣದಲ್ಲಿದೆ. ಎಡಬದಿಯಲ್ಲಿ ಶ್ರೀ ಕ್ಷೇತ್ರಪಾಲನ ಸನ್ನಿಧಿಯಿದೆ. ದೈನಂದಿನ ಪೂಜೆಗಳಲ್ಲಿ ಪ್ರಥಮ ಪೂಜೆ ದುರ್ಗಾಪರಮೇಶ್ವರಿಗೆ ನಡೆಯುತ್ತದೆ. ನಂತರ ಶ್ರೀ ರಾಜರಾಜೇಶ್ವರೀ ದೇವಿಗೆ ಹಾಗೂ ಪರಿವಾರ ದೇವತೆಗಳಿಗೆ ಪೂಜೆ ನಡೆಯುತ್ತದೆ. ಇದು ಇಲ್ಲಿಯ ವಿಶೇಷತೆ. ಪ್ರದಾನ ದೇವತೆ ಶ್ರೀ ರಾಜರಾಜೇಶ್ವರೀ, ಶ್ರೀ ಭದ್ರಕಾಳಿ, ಶ್ರೀ ಮಹಾಗಣಪತಿ, ಶ್ರೀ ಸುಬ್ರಹ್ಮಣ್ಯ ಆಳೆತ್ತರದ ಕುಳಿತ ಭಂಗಿಯ ವಿಗ್ರಹಗಳಾಗಿದ್ದು ಇದು ಭಾರತದಲ್ಲೇ ಪ್ರಥಮ ಎಂದು ಹೇಳಿದರೂ ತಪ್ಪಗಲಾರದು.

ಶ್ರೀ ಕ್ಷೇತ್ರದಲ್ಲಿ ಶ್ರೀ ರಾಜರಾಜೇಶ್ವರೀಯ ಸಾನಿಧ್ಯದಷ್ಟೇ ಶ್ರೀ ಸುಬ್ರಹ್ಮಣ್ಯನ ಸಾನಿಧ್ಯವಿದ್ದು ಜಾತ್ರೋತ್ಸವಗಳು ಶ್ರೀ ಸುಬ್ರಹ್ಮಣ್ಯನಿಗೆ ನಡೆಯುವುದು ವಿಶೇಷ. ದೈನಂದಿನ ದಿನಗಳಲ್ಲಿ ಬೆಳಿಗ್ಗೆ, ಮಧ್ಯಾಹ್ನ, ರಾತ್ರಿ ಹೀಗೆ ಮೂರು ಹೊತ್ತು ಪೂಜೆ ನಡೆಯುತ್ತದೆ. ಮಂಗಳವಾರ, ಗುರುವಾರ ಆದಿತ್ಯವಾರಗಳಲ್ಲಿ ಶೀ ಭದ್ರಕಾಳಿ ದೇವರಿಗೆ ರಾತ್ರಿ ಗಾಯತ್ರಿ ಪೂಜೆ ನಡೆಯುತ್ತದೆ. ವರ್ಷಂಪ್ರತಿ ನಡೆಯುವ ವಿಶೇಷ ಹಬ್ಬಗಳ ಆಚರಣೆ ಇಲ್ಲಿದೆ. ಇಲ್ಲಿಯ ಜಾತ್ರೋತ್ಸವ ಲೋಕಪ್ರಸಿದ್ಡವಾದುದು, ಹದಿನಾರು ಮಾಗಣೆ ಒಳಪಟ್ಟ್ತ ಈ ದೇವಸ್ಥಾನವು ಸಾವಿರ ಸೀಮೆಯ ದೇವಸ್ಥಾನವೆಂದೇ ಪ್ರಸಿದ್ಡಿ ಪಡೆದಿದೆ. ಪವಿತ್ರವಾದ ಪಲ್ಗುಣಿ ನದಿಯ ಎಡದಂಡೆಯಲ್ಲಿ ಹೊಲ, ಗುಡ್ಡೆ ಬೆಟ್ಟಗಳ ಮದ್ಯದಲ್ಲಿ ಶ್ರೀ ದೇವಳವು ರಾರಾಜಿಸುತ್ತದೆ.

ಈ ಕ್ಷೇತ್ರ ಮಹಾಕಾಳಿ, ಮಹಾಲಕ್ಷ್ಮೀ, ಮಹಾಸರಸ್ವತಿ ಸ್ವರೂಪಳಾದ ಶ್ರೀ ಮಾತೆ, ಭಕ್ತರ ಭಕ್ತಿಗೆ ಫಲವನ್ನು ಈಯುತ್ತಾ ಇಷ್ಟಪ್ರದಾಯಕಿಯಾಗಿ ಇಲ್ಲಿ ಮೆರೆಯುತ್ತಿದ್ದಾಳೆ. ಈ ಕಾರಣದಿಂದಾಗಿ ಇಲ್ಲಿಗೆ ಭಕ್ತಮಾಹಾಸಾಗರವೇ ಹರಿದು ಬರುವುದು ವಿಶೇಷ. ಶ್ರೀದೇವಿಗೆ ತೊಡಲು ಹದಿನೆಂಟು ಮೊಳದ ಸೀರೆ ವಿಶೇಷ. ಇಲ್ಲಿ ಸಾನಿಧ್ಯವೃದ್ಧಿಗಾಗಿ ಪ್ರತೀ ಹನ್ನೆರಡು ವರ್ಷಕ್ಕೊಮ್ಮೆ ಲೇಪಾಷ್ಟ ಗಂಧ ಬ್ರಹ್ಮಕಲಶಾಭಿಷೇಕ ನಡೆಯುತ್ತದೆ.

ಈ ಕ್ಷೇತ್ರದ ಹಿನ್ನೆಲೆ : ಸುಮಾರು ಸಾವಿರಾರು ವರ್ಷಗಳ ಇತಿಹಾಸವುಳ್ಳ ಈ ದೇವಸ್ಥಾನವನ್ನು ಸುರಥ ಮಹಾರಾಜನು ನಿರ್ಮಿಸಿದನೆಂದು ಪುರಾಣವಿದೆ. ಸುರಥ ಮಹಾರಾಜನು ವೈರಿಗಳ ಆಕ್ರಮನದಿಂದ ನಡೆದ ಯುದ್ದದಲ್ಲಿ ಸೋತು ಎಲ್ಲವನ್ನು ಕಳೆದುಕೊಂಡು ವೈರಾಗ್ಯದಿಂದ ಬರುತ್ತಿರಲು ಸುಮೇದಿ ಎಂಬ ವೈಶ್ಯನು ಸಿಕ್ಕಿದ್ದನು. ಇವರಿಬ್ಬರು ಒಟ್ಟಾಗಿ ಕಾಡದಾರಿಯಲ್ಲಿ ಹೋಗುತ್ತಿರಲು ಸುಮೇಧ ಮುನಿಯ ಆಶ್ರಮವನ್ನು ಕಂಡು ಮುನಿವರ್ಯರಲ್ಲಿ ತನ್ನ ಕಷ್ಟವೆಲ್ಲವನ್ನು, ಹೇಳಲಾಗಿ, ಋಷಿಮುನಿಯು ಅರಸನಿಗೆ ಶ್ರೀ ರಾಜರಾಜೇಶ್ವರೀಯ ಮಂತ್ರೋಪದೇಶವನ್ನು ಕೊಟ್ಟು ಧ್ಯಾನದಿಂದಿರಲು ಹೇಳಲಾಗಿ, ರಾಜನು ಶ್ರೀದೇವಿಯ ಧ್ಯಾನದಲ್ಲಿರಲು ಒಂದು ದಿನ ಕನಸಿನಲ್ಲಿ ಆಸ್ಥಾನರೂಢಳಾಗಿ ಪರಿವಾರ ಸಹಿತ ಕುಳಿತಿದ್ದ ಶ್ರೀ ದೇವಿಯನ್ನು ಕಂಡ ಅರಸ ವಿಷಯವನ್ನು ಮುನಿಗೆ ತಿಳಿಸಲಾಗಿ, ಸುಮೇಧ ಮುನಿಯು ಅರಸನಿಗೆ ತಾನು ಕಂಡಂತೇ ಮೂರ್ತಿಯನ್ನು ಸೃಷ್ಟಿಸಿ, ಪ್ರತಿಷ್ಟಾಪಿಸಿ ಪೂಜಿಸು ಎಂದು ಹೇಳಿದಂತೆ ಮಣ್ಣಿನಿಂದ ಪರಿವಾರ ಸಹಿತ ಶ್ರೀದೇವಿಯ ಮೂರ್ತಿಯನ್ನು, ಸೃಷ್ಟಿಸಿ, ಪೂಜಿಸುತ್ತಿರಲು ತಾನು ಕಳಕೊಂಡ ಸಮಸ್ತ ರಾಜ್ಯಗಳನ್ನು ಮರಳಿ ಪಡೆದನೆಂದು ಕಥೆಯಿದೆ. ಸಂಗ್ರಹ ಮಾಹಿತಿ.

ಪೊಳಲಿ ಪೋಸ್ಟ್, ಕರಿಯಂಗಳ ಗ್ರಾಮ. ಬಂಟ್ವಾಳ ತಾಲ್ಲೂಕು, ದಕ್ಷಿಣ ಕನ್ನಡ ಜಿಲ್ಲೆ – 574 219, 0824 2266141

Leave a Reply

Your email address will not be published. Required fields are marked *