ಹಲವರು ಬೆಕ್ಕನ್ನು ಮನೆ ಸದಸ್ಯನಂತೆ ಸಾಕಿ ಸಲುಹುತ್ತಾರೆ. ಆದ್ರೆ ಕೆಲವರಿಗೆ ಈ ಬೆಕ್ಕು ಅಪಶಕುನ. ಆದರೆ ಮಂಡ್ಯದ ಬೆಕ್ಕಳೆಲೆ ಗ್ರಾಮದಲ್ಲಿ ಬೆಕ್ಕಿಗೆ ವಿಶೇಷ ಸ್ಥಾನ ನೀಡಲಾಗಿದೆ. ಮಾರ್ಜಾಲಕ್ಕೆ ದೇವಾಲಯವನ್ನು ಕಟ್ಟಿ ಭಕ್ತಿ ಭಾವದಿಂದ ಪೂಜೆ ಮಾಡಲಾಗುತ್ತದೆ.

ಬೆಕ್ಕು ಗ್ರಾಮದೇವತೆ ಆಗಿರುವುದರಿಂದ ಈ ಗ್ರಾಮಕ್ಕೆ ಬೆಕ್ಕಳಲೆ ಎಂಬ ಹೆಸರು ಬಂದಿದೆ. ಹಲವು ವರ್ಷಗಳ ಹಿಂದೆ ಸಮಾಧಿ ಮಾಡಲಾದ ಬೆಕ್ಕಿನ ಗದ್ದುಗೆಗೆ ಗ್ರಾಮಸ್ಥರು ಪೂಜೆ ಮಾಡುತ್ತಾರೆ. ವರ್ಷಕ್ಕೊಮ್ಮೆ ಜಾತ್ರೆ ಕೂಡ ಇಲ್ಲಿ ನಡೆಯುತ್ತದೆ. ಹಬ್ಬ ಹರಿದಿನಗಳಲ್ಲಿ ಬೆಕ್ಕಿಗೆ ಎಡೆಕೊಟ್ಟು ಬೆಕ್ಕು ಬಿಟ್ಟ ಎಂಜಲನ್ನೇ ಪ್ರಸಾದವಾಗಿ ಸ್ವೀಕರಿಸುವ ಸಂಪ್ರದಾಯ ಕೂಡ ಇದೆ.

ಬೆಕ್ಕಿಗೆ ದೇವಾಲಯವನ್ನೇ ಕಟ್ಟಿರುವ ಗ್ರಾಮಸ್ಥರು ಬೆಕ್ಕಿನ ಮಂಗಮ್ಮ ಹೆಸರಲ್ಲಿ ಪ್ರತಿ ಮಂಗಳವಾರ ವಿಶೇಷ ಪೂಜೆ ಸಲ್ಲಿಸಿ ಭಕ್ತಿ ಮೆರೆಯುತ್ತಾರೆ. ಗ್ರಾಮದಲ್ಲಿ ಯಾವುದೇ ಬೆಕ್ಕು ಸತ್ತರು ಮನುಷ್ಯರಂತೆ ಅಂತ್ಯಸಂಸ್ಕಾರ ನೆರವೇರಿಸುತ್ತಾರೆ. ಅಷ್ಟೇ ಅಲ್ಲದೇ ಬೆಕ್ಕಿಗೆ ಹೊಡೆಯುವುದು ಬಡಿಯುವುದು ಈ ಗ್ರಾಮದಲ್ಲಿ ನಿಷೇಧ. ಈ ಜನರು ಪ್ರತಿದಿನ ಕೆಲಸಕ್ಕೆ ಹೋಗುವ ಮುನ್ನ ಬೆಕ್ಕಿನ ದರ್ಶನ ಪಡೆಯುವುದನ್ನ ರೂಢಿಸಿಕೊಂಡಿದ್ದಾರೆ.

ನಮ್ಮ ಪೂರ್ವಜರ ಕಾಲದಲ್ಲಿ ಮಂಗಮ್ಮ ದೇವಿಯು ಬೆಕ್ಕಿನ ರೂಪದಲ್ಲಿ ನಮ್ಮ ಊರಿಗೆ ಬಂದಳು. ತನ್ನ ಶಕ್ತಿಯನ್ನು ತೋರಿಸಿ ಮಾಯವಾದಳು ಆಗಿನಿಂದ ನಮ್ಮ ಪೂರ್ವಜನರು ಹಾಗೂ ಈ ಊರಿನ ಜನತೆ ದೇವಿಯನ್ನು ಬೆಕ್ಕಿನ ರೂಪದಲ್ಲಿ ಪೂಜಿಸುತ್ತಿದ್ದಾರೆ ಎನ್ನುತ್ತಾರೆ ಸ್ಥಳೀಯರು.

ಈ ಊರಿನಲ್ಲಿ ಮಂಗಮ್ಮ ಉತ್ಸವವನ್ನು ಆಚರಿಸಲಾಗುತ್ತದೆ. ಜೋತ್ಯೀಷಿಗಳು ಹೇಳಿದಾಗ ಈ ಉತ್ಸವ ಆಚರಿಸಲಾಗುತ್ತದೆ. ಮೂರು ನಾಲ್ಕು ದಿನಗಳ ಕಾಲ ಈ ಉತ್ಸವ ನಡೆಯುತ್ತದೆ. ಕಳೆದ ಉತ್ಸವ ಮೂರು ವರ್ಷಗಳ ಹಿಂದೆ ನಡೆದಿದೆ. ಈ ಉತ್ಸವವನ್ನು ಊರಿನವರು ತಮ್ಮ ಮನೆಯವರು ಹಾಗೂ ಸ್ನೇಹಿತರ ಜೊತೆ ಸೇರಿ ಆಚರಿಸುತ್ತಾರೆ.

Leave a Reply

Your email address will not be published. Required fields are marked *