ಮಧುಮೇಹಿಗಳು ತಮ್ಮ ರಕ್ತದಲ್ಲಿ ಸಕ್ಕರೆಯ ಮಟ್ಟವನ್ನು ನಿಯಂತ್ರಿಸುವುದು ಅಗತ್ಯವಾದ ಕಾರಣ ಹಲವು ಆಹಾರಗಳನ್ನು ಸೇವಿಸಬಾರದು. ಆದರೆ, ಬೆಂಡೆಕಾಯಿ ಸಕ್ಕರೆಯ ಮಟ್ಟವನ್ನು ಏರಿಸದೇ ಇರುವುದು ಮಾತ್ರವಲ್ಲ, ತಗ್ಗಿಸುವುದನ್ನೂ ಅಧ್ಯಯನ ಮತ್ತು ಪ್ರಯೋಗಳ ಮೂಲಕ ಕಂಡುಕೊಳ್ಳಲಾಗಿದೆ. ನೋಡಲಿಕ್ಕೆ ಮಹಿಳೆಯರ ಬೆರಳಿನಂತೇನೂ ಇಲ್ಲದೇ ಇದ್ದರೂ ಲೇಡೀಸ್ ಫಿಂಗರ್ ಎಂಬ ಸುಂದರ ಹೆಸರನ್ನು ಹೊಂದಿರುವ ಬೆಂಡೆಕಾಯಿ ಭಾರತದ ಎಲ್ಲಾ ಕಡೆಗಳಲ್ಲಿ ಸುಲಭವಾಗಿ ಲಭ್ಯವಾಗುವ ತರಕಾರಿಯಾಗಿದೆ. ಕೆಲವಾರು ವರ್ಷಗಳಿಂದ ಬೆಂಡೆಕಾಯಿಯನ್ನು ರಕ್ತದಲ್ಲಿ ಸಕ್ಕರೆಯ ಮಟ್ಟವನ್ನು ತಗ್ಗಿಸುವ ಆಹಾರವಾಗಿ ಭಾರತದ ಸಹಿತ ತುರ್ಕಿ, ಪೂರ್ವ ಮೆಡಿಟರೇನಿಯನ್ ದೇಶಗಳಲ್ಲಿ ಬಳಸಲಾಗುತ್ತಿದೆ. ಅಷ್ಟೇ ಅಲ್ಲ, ಅಯುರ್ವೇದವೂ ಸಕ್ಕರೆಯನ್ನು ನಿಯಂತ್ರಿಸಲು ಬೆಂಡೆಕಾಯಿ ಸೇವಿಸುವಂತೆ ಸಲಹೆ ಮಾಡಿದೆ. ಬೆಂಡೆಕಾಯಿಯಲ್ಲಿ ಅವಶ್ಯಕ ಪೋಷಕಾಂಶಗಳ ಜೊತೆಗೇ ವಿಟಮಿನ್ನುಗಳು, ಖನಿಜಗಳು ಮತ್ತು ಕರಗದ ಮತ್ತು ಕರಗುವ ನಾರಿನಂಶಗಳು ಇವೆ. ಅಲ್ಲದೇ ಪ್ರತಿ ನೂರು ಗ್ರಾಂನಲ್ಲಿ ಕೇವಲ 33ಕಿಲೋಕ್ಯಾಲೊರಿಗಳಿವೆ.

ಮಧುಮೇಹಿಗಳ ದೇಹದಲ್ಲಿ ಇನ್ಸುಲಿನ್ ಕೊರತೆ ಅಥವಾ ಇನ್ಸುಲಿನ್ ಬಳಸಲು ಅಸಾಮರ್ಥ್ಯತೆ ಯಿಂದ ರಕ್ತದಲ್ಲಿನ ಗ್ಲುಕೋಸ್ ಅನ್ನು ಪರಿಪೂರ್ಣವಾಗಿ ಬಳಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಈ ವ್ಯಕ್ತಿಗಳು ಆಹಾರಕ್ರಮ, ಸಾಕಷ್ಟು ವಿಶ್ರಾಂತಿ ಮತ್ತು ಸರಳ ಜೀವನಕ್ರಮದ ಮೂಲಕ ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ಆರೋಗ್ಯಕರ ಮಿತಿಗಳ ಒಳಗೇ ಇರುವಂತೆ ನೋಡಿಕೊಳ್ಳಬೇಕಾಗುತ್ತದೆ. ಈ ನಿಟ್ಟಿನಲ್ಲಿ ಮಧುಮೇಹಿಗಳಿಗೆ ನೆರವಾಗುವ ಹಾಗೂ ಇತರ ಅಂಗಗಳು ಮಧುಮೇಹದಿಂದ ಹಾನಿಗೆ ಒಳಗಾಗುವುದನ್ನು ತಡೆಯುವ ಕೆಲವು ಆಹಾರಗಳಿವೆ ಹಾಗೂ ಬೆಂಡೆಕಾಯಿ ಈ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆಯುತ್ತದೆ. ಬೆಂಡೆಕಾಯಿಯನ್ನು ಎಳತಾಗಿದ್ದಾಗ ಖಾದ್ಯಗಳ ರೂಪದಲ್ಲಿ ಸೇವಿಸಬಹುದು. ಇವನ್ನು ಚೆನ್ನಾಗಿ ಒಣಗಿಸಿ ಪುಡಿ ಮಾಡಿಯೂ ಸೇವಿಸಬಹುದು.

ಈ ಎರಡೂ ವಿಧಾನಗಳ ಬಗ್ಗೆ ಹಲವಾರು ಅಧ್ಯಯನಗಳನ್ನು ನಡೆಸಲಾಗಿದೆ ಹಾಗೂ ಫಲಿತಾಂಶಗಳು ಮಧುಮೇಹಿಗಳ ಪಾಲಿಗೆ ಸಂತೋಷಕರವಾಗಿಯೇ ಇವೆ.ಬೆಂಡೆಕಾಯಿಯಲ್ಲಿರುವ ಪೋಷಕಾಂಶಗಳು ಹಾಗೂ ಕರಗುವ ಮತ್ತು ಕರಗದ ನಾರಿನಂಶಗಳು ಆಹಾರದ ಸಕ್ಕರೆಯನ್ನು ಅತಿ ನಿಧಾನವಾಗಿ ರಕ್ತದಲ್ಲಿ ಬೆರೆಯುವಂತೆ ಮಾಡುತ್ತವೆ. ಅಲ್ಲದೇ ಆಹಾರದಲ್ಲಿರುವ ಕಾರ್ಬೋಹೈಡ್ರೇಟುಗಳು ಅತಿ ನಿಧಾನವಾಗಿ ಜೀರ್ಣಗೊಳ್ಳುತ್ತವೆ. ಇವೆರಡೂ ಮಧುಮೇಹಿಗಳಿಗೆ ಹೇಳಿ ಮಾಡಿಸಿದಂತಹ ಗುಣಗಳಾಗಿವೆ. ತನ್ಮೂಲಕ ಊಟವಾದ ತಕ್ಷಣ ರಕ್ತದಲ್ಲಿ ಸಕ್ಕರೆಯ ಮಟ್ಟ ಧಿಡೀರನೇ ಏರುವುದು, ಊಟವಾದ ಕೊಂಚ ಹೊತ್ತಿಗೇ ಮತ್ತೊಮ್ಮೆ ಹಸಿವಾಗುವುದು ಮೊದಲಾದ ಕಳ್ಳಾಟಗಳೆಲ್ಲಾ ಬೆಂಡೆಕಾಯಿ ಬಂದ ಬಳಿಕ ಮೂಲೆ ಸೇರುತ್ತವೆ.

Leave a Reply

Your email address will not be published. Required fields are marked *