ಶ್ರೀ ಹುಲಿಗೆಮ್ಮ ದೇವಿ ಅಥವಾ ಹುಲಿಗೆಮ್ಮ ಎಂದು ಕರೆಯಲಾಗುವ ಈ ದೇವಸ್ಥಾನ ಇರುವುದು ಉತ್ತರ ಕರ್ನಾಟಕದ ಕೊಪ್ಪಳ ತಾಲ್ಲೂಕಿನ, ತುಂಗ ಭದ್ರಾ ನದಿಯ ದಡದ ಮೇಲಿರುವ ಹುಲಿಗಿ ಎನ್ನುವ ಪಟ್ಟಣದಲ್ಲಿ. ಈ ಸ್ಥಳವನ್ನು ‘ವ್ಯಾಘ್ರಪುರಿ’ ಎಂಬ ಸಂಸ್ಕೃದಲ್ಲೂ ಕರೆಯುತ್ತಾರೆ. ಇಲ್ಲಿರುವ ಮೂಲ ದೇವರೆಂದರೆ ದುರ್ಗಾ ದೇವಿ ಸ್ವರೂಪಿಯಾದ ಹುಲಿಗೆಮ್ಮ ದೇವಿ ಹಾಗು ಈ ದೇವಸ್ಥಾನದಲ್ಲೇ ಸೋಮನಾಥನ ದೇವಸ್ಥಾನ ಕೂಡ ಇದೆ. ಈ ದೇವಸ್ಥಾನದಲ್ಲಿ ಈಶ್ವರ ಸೋಮೇಶ್ವರನ ರೂಪದಲ್ಲಿ ನೆಲೆಸಿದ್ದಾನೆ.

ದೇವಸ್ಥಾನದ ಹಿನ್ನಲೆ: ಹುಲಗಿ ಕ್ಷೇತ್ರವನ್ನು ಹಿಂದೆ ವ್ಯಾಘ್ರಪುರಿ ಎಂದು ಕರೆಯಲಾಗುತಿತ್ತು ಕಾರಣ ಹುಲಿಗೆ ದೇವಿಯ ಹೆಸರು ವ್ಯಾಘರೇಶ್ವರಿ ದೇವಿ. ಇಲ್ಲಿನ ಗ್ರಾಮೀಣ ಭಾಗದಲ್ಲಿ ವ್ಯಾಘರೇಶ್ವರಿ ಎಂಬ ಪದ ಹುಲಿಯಾಗಿ ಕರೆಯಲ್ಪಟ್ಟಿದೆ. ಆ ಕಾಲದಲ್ಲಿ ನಾಗಯೋಗಿ ಮತ್ತು ಬಸವಯೋಗಿ ಎಂಬ ಇಬ್ಬರು ಭಕ್ತರಿದ್ದರು. ಅವರು ಪ್ರತಿ ಹುಣ್ಣಿಮೆಯಂದು ಸವದತ್ತಿ ಎಲ್ಲಮ್ಮನಿಗೆ ಕಾಲು ನಡಿಗೆಯ ಮೂಲಕ ದರ್ಶನ ಮಾಡಲು ತೆರಳುತ್ತಿದ್ದರು. ಅದು ಮಳೆಗಾಲವಾದ್ದರಿಂದ ಮಲಪ್ರಭಾ ನದಿ ತುಂಬಿ ಹರಿಯುತ್ತ ಇತ್ತು.

ಮಾರನೇದಿನ ಹುಣ್ಣಿಮೆ ಆದ್ದರಿಂದ ಹುಲಿಗೆಮ್ಮ ದೇವಿಯ ದರುಶನ ಸಾಧ್ಯವಾಗಲಿಲ್ಲ ಸತತ ಎರಡು ದಿನಗಳ ಕಾಲ ಮಳೆ ಸುರಿಯುತಿದ್ದಿದ್ದರಿಂದ ನಾಗಯೋಗಿ ಹಾಗು ಬಸವಯೋಗಿ ಮಳೆ ಗಾಳಿಗೆ ತತ್ತರಿಸಿ ಹೋಗಿದ್ದರು. ಸತತವಾಗಿ ಎಲ್ಲಮ್ಮ ದೇವಿಯ ಸ್ಮರಣೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಇವರ ಭಕ್ತಿಗೆ ಮೆಚ್ಚಿ ಸಾಕ್ಷಾತ್ ಎಲಮ್ಮ ದೇವಿಯು ಪ್ರತ್ಯಕ್ಷಳಾಗಿ ನಾನು ಇನ್ನು ಮುಂದೆ ನಿಮ್ಮ ಊರಿನಲ್ಲಿಯೇ ನೆಲೆಸುತ್ತೇನೆ ಎಂದು ಅಭಯ ಹಸ್ತ ನೀಡಿದಳು. ಹಾಗಾಗಿ ಈ ದೇವಿಯನ್ನು ಹುಲಿಗೆಮ್ಮ ಎಂದು ಕರೆಯಲಾಯಿತು. ಅಂದಿನಿಂದ ಇಂದಿನ ವರೆಗೂ ದೇವಿಗೆ ಪೂಜೆ ಮತ್ತು ವಿವಿಧ ರೀತಿಯಲ್ಲಿ ನಡೆದು ಬರುತ್ತಾ ಇದೆ.

ಸುಮಾರು 13 ನೆಯ ಶತಮಾನಕ್ಕೆ ಸೇರಿದ ಈ ದೇವಸ್ಥಾನದಲ್ಲಿ ನಾಗಜೋಗಿ ಹಾಗು ಬಸವಜೋಗಿ ಎಂಬ ಇಬ್ಬರು ಭಕ್ತರ ಆಸೆಗಳನ್ನು ಈಡೇರಿಸಲು ರೇಣುಕಾಂಬ ದೇವಿಯೇ ಹುಲಿಗೆಮ್ಮಳಾಗಿ ನೆಲೆಸಿದ್ದಾಳೆ. ದೇವಸ್ಥಾನದಲ್ಲಿ ಇರುವ ಕೆತ್ತನೆಯ ಪ್ರಕಾರ ಈ ದೇವಸ್ಥಾನವನ್ನು ಚತುರ್ವೇದಿ ಭಟ್ಟರಿಗೆ ಒಬ್ಬ ಚಾಲುಕ್ಯ ರಾಜನಾದ ವಿಕ್ರಮಾದಿತ್ಯ ಉಡುಗೊರೆಯಾಗಿ ನೀಡಿದ್ದ. ದೇವಸ್ಥಾನದ ಮುಂದೆ 25 ಅಡಿ ಎತ್ತರದ ಧ್ವಜ ಸ್ಥಂಬವಿದ್ದು ಅದರ ಮುಂದೆ ಪ್ರತಿ ವರ್ಷ ಜಾತ್ರೆ ನಡೆಯುತ್ತದೆ. ಪ್ರತಿ ಮಂಗಳವಾರ ಹಾಗು ಶುಕ್ರವಾರ ದೇವಿಗೆ ವಿಶೇಷ ಪೂಜೆಗಳು ನಡೆಯುವುದರಿಂದ ಅಂದಿನ ದಿನ ಜನ ಸಂದಡಿ ಕೂಡ ಹೆಚ್ಚಾಗಿರುತ್ತದೆ.

ಪ್ರತಿ ವರ್ಷ ಭರತ ಹುಣ್ಣಿಮೆಯ ಒಂಬತ್ತು ದಿನಗಳ ನಂತರ ಇಲ್ಲಿ ದೊಡ್ಡ ಜಾತ್ರೆ ನಡೆಯುತ್ತದೆ. ಇದು ಕರ್ನಾಟಕದ ಪ್ರಸಿದ್ಧ ಜಾತ್ರೆಗಳಲ್ಲಿ ಹುಲಿಗೆಮ್ಮ ದೇವಿಯ ಜಾತ್ರೆ ಕೂಡ ಒಂದು. ಆ ಸಂದರ್ಭದಲ್ಲಿ ಕುದಿಯುವ ಪಾಯಸದ ಪಾತ್ರೆಗೆ ಕೈ ಹಾಕಿ ಪಾಯಸ ತೆಗೆದು ದೇವಿಗೆ ನೈವೇದ್ಯ ಅರ್ಪಿಸುವುದು ಇಲ್ಲಿನ ವಿಶೇಷ.

Leave a Reply

Your email address will not be published. Required fields are marked *