ಆಕೆಯ ತಂದೆ, ತಾಯಿ ಇಬ್ಬರೂ ವೈದ್ಯರು. ಮಧ್ಯಮವರ್ಗದ ಕುಟುಂಬದಲ್ಲಿ ಹುಟ್ಟಿದ ಆಕೆಗೆ ಬಾಲ್ಯದಲ್ಲಿ ಯಾವ ಕಷ್ಟವೂ ಗೊತ್ತಾಗಲೇ ಇಲ್ಲ. ಆದರೆ, ಆಕೆಗೆ 16 ವರ್ಷವಾದಾಗ ಇದ್ದಕ್ಕಿದ್ದಂತೆ ಆಕೆಯ ಕಿವಿ ಕಿವುಡಾಯಿತು.ಆಗ ಕುಟುಂಬಸ್ಥರೆಲ್ಲ ಆಕೆಯ ಬಗ್ಗೆಯೇ ಮಾತನಾಡಿಕೊಳ್ಳತೊಡಗಿದರು. ಇವಳನ್ನು ಇನ್ಯಾರು ಮದುವೆಯಾಗ್ತಾರೆ? ಇವಳಿನ್ನು ಮನೆಯಲ್ಲೇ ಕೂರಬೇಕಷ್ಟೆ ಎಂಬ ಚುಚ್ಚು ಮಾತುಗಳು ಹೆಚ್ಚಾಗತೊಡಗಿತು. ನಾನು ಇವರೆಲ್ಲರ ಮುಂದೆ ಎತ್ತರಕ್ಕೆ ಬೆಳೆದು ತೋರಿಸಲೇಬೇಕು ಎಂದು ಆಗ ಆಕೆ ನಿರ್ಧಾರ ಮಾಡಿದಳು. ಅದರಂತೆ ಬಹಳ ಚಿಕ್ಕ ವಯಸ್ಸಿನಲ್ಲೇ ಮೊದಲ ಪ್ರಯತ್ನದಲ್ಲೇ ಯುಪಿಎಸ್​ಸಿ​ ಪರೀಕ್ಷೆ ಪಾಸ್ ಮಾಡಿ ಐಎಎಸ್​ ಅಧಿಕಾರಿಯಾದಳು. ಆಕೆಯ ಬಗ್ಗೆ ಮಾತನಾಡಿಕೊಂಡವರು ಇನ್ನೂ ಅಲ್ಲೇ ಇದ್ದಾರೆ. ಆದರೆ, ಅದರಿಂದ ಹಠ ತೊಟ್ಟ ಆಕೆ ತನ್ನ ವೈಕಲ್ಯವನ್ನು ಮೀರಿ ಸಾಧಕಳಾಗಿ ನಿಂತಿದ್ದಾಳೆ. ಆಕೆಯ ಹೆಸರು ಸೌಮ್ಯ ಶರ್ಮ ಸಾಧಿಸಲೇಬೇಕು ಎಂಬ ಹಠವಿದ್ದರೆ ಅದಕ್ಕೆ ನಮ್ಮ ಯಾವ ನ್ಯೂನತೆಗಳೂ, ಸಮಸ್ಯೆಗಳೂ ಅಡ್ಡಿಯಾಗುವುದಿಲ್ಲ.

ಸೌಮ್ಯ ಶರ್ಮ 2017ರಲ್ಲಿ ಯುಪಿಎಸ್​ಸಿ ಪರೀಕ್ಷೆಯನ್ನು ಪಾಸ್ ಮಾಡಿದ ಯುವತಿ. ತನ್ನ 16ನೇ ವರ್ಷದಲ್ಲಿ ಶ್ರವಣ ಸಾಮರ್ಥ್ಯವನ್ನು ಕಳೆದುಕೊಂಡ ಸೌಮ್ಯ ಅದರಿಂದ ಜೀವನವೇ ಮುಗಿದು ಹೋಯಿತೆಂದು ಧೃತಿಗೆಡಲಿಲ್ಲ. ಬದಲಾಗಿ ತನ್ನ ವೈಕಲ್ಯಕ್ಕೇ ಸವಾಲೊಡ್ಡಿ ಅಪ್ಪ-ಅಮ್ಮನ ಪ್ರೋತ್ಸಾಹದಿಂದ ಮೊದಲ ಪ್ರಯತ್ನದಲ್ಲೇ ಐಎಎಸ್​ ಅಧಿಕಾರಿಯಾಗಿ ಆಯ್ಕೆಯಾಗಿದ್ದಾಳೆ. ತನ್ನ ಮೊದಲ ಪ್ರಯತ್ನದಲ್ಲೇ ಯುಪಿಎಸ್​ಸಿ ಪರೀಕ್ಷೆಯಲ್ಲಿ ಭಾರತಕ್ಕೆ 9ನೇ ರ್ಯಾಂಕ್ ಕೂಡ ಪಡೆದಿದ್ದಾಳೆ. ದೆಹಲಿ ಮೂಲದ ಸೌಮ್ಯ ಬಹಳ ಸುಂದರವಾದ ಬಾಲ್ಯವನ್ನು ಅನುಭವಿಸಿದ್ದ ಹುಡುಗಿ. ಅಪ್ಪ-ಅಮ್ಮ ಇಬ್ಬರೂ ವೈದ್ಯರಾಗಿದ್ದರಿಂದ ಮನೆಯಲ್ಲಿ ಯಾವುದಕ್ಕೂ ಕೊರತೆಯೇನೂ ಇರಲಿಲ್ಲ. ಹಾಗಂತ ಸುಖದ ಸುಪ್ಪತ್ತಿಗೆಯೂ ಇರಲಿಲ್ಲ.

ಮಧ್ಯಮ ವರ್ಗದ ಕುಟುಂಬದ ಸೌಮ್ಯ ಮೊದಲಿನಿಂದಲೂ ಓದಿನಲ್ಲಿ ಬಹಳ ಚುರುಕು. ಆದರೆ, ಆಕೆಗೆ 16 ವರ್ಷವಾದಾಗ ಅಂದರೆ ಎಸ್​ಎಸ್​ಎಲ್​ಸಿಯಲ್ಲಿದ್ದಾಗ ಇದ್ದಕ್ಕಿದ್ದಂತೆ ಆಕೆಗೆ ಕಿವಿ ಕೇಳದಂತಾಯಿತು. ಏನೆಲ್ಲ ಆಪರೇಷನ್ ಮಾಡಿದರೂ ಉಪಯೋಗವಾಗಲಿಲ್ಲ. ಆಕೆ ಶೇ. 95ರಷ್ಟು ಭಾಗ ಕಿವುಡಿಯಾಗಿದ್ದರು. ಈ ಶಾಕ್​ನಿಂದ ಹೊರಗೆ ಬರಲು ಆಕೆಯ ಕುಟುಂಬಕ್ಕೆ ಬಹಳ ಸಮಯವೇ ಬೇಕಾಯಿತು. ಅದರ ಮಧ್ಯೆ ಕುಟುಂಬಸ್ಥರು, ಸುತ್ತಮುತ್ತಲಿನವರ ಟೀಕೆಗಳು ಬೇರೆ ಮನಸನ್ನು ಇನ್ನಷ್ಟು ಚುಚ್ಚುತ್ತಿತ್ತು. ನೋಡಲು ಬಹಳ ಸುಂದರವಾಗಿದ್ದ ಸೌಮ್ಯಳಿಗೆ ಕಿವುಡುತನವೊಂದು ದೊಡ್ಡ ಕಪ್ಪು ಚುಕ್ಕಿಯಾಗಿತ್ತು. ಆದರೆ, ಸೌಮ್ಯ ಮಾತ್ರ ಇದರಿಂದ ಧೈರ್ಯ ಕಳೆದುಕೊಳ್ಳಲಿಲ್ಲ.

ಹಿಯರಿಂಗ್ ಏಡ್ ಬಳಸಿ ಆಕೆ ದೆಹಲಿಯ ನ್ಯಾಷನಲ್ ಲಾ ಸ್ಕೂಲ್​ನಲ್ಲಿ ಕಾನೂನು ಪದವಿ ಪಡೆದರು. ತನ್ನ 23ನೇ ವಯಸ್ಸಿಗೆ ಮೊದಲ ಬಾರಿಗೆ ಯುಪಿಎಸ್​ಸಿ ಪರೀಕ್ಷೆ ಬರೆದರು. ಅಚ್ಚರಿಯೆಂಬಂತೆ ಆ ಪರೀಕ್ಷೆಯಲ್ಲಿ ಆಕೆ ಉತ್ತೀರ್ಣಳಾಗಿ 9ನೇ ರ್ಯಾಂಕ್ ಪಡೆದು ಐಎಎಸ್​ಗೆ ಆಯ್ಕೆಯಾದರು. ಯಾವುದೇ ಕೋಚಿಂಗ್ ತೆಗೆದುಕೊಳ್ಳದೆ ಪರೀಕ್ಷೆ ಬರೆದ ಸೌಮ್ಯ ಈಗಲೂ ಅನೇಕ ಕಾಲೇಜುಗಳಿಗೆ ಹೋಗಿ ಯುಪಿಎಸ್​ಸಿ ಪರೀಕ್ಷೆಗೆ ಯಾವ ರೀತಿ ಸಿದ್ಧತೆ ಮಾಡಿಕೊಳ್ಳಬೇಕೆಂಬ ಬಗ್ಗೆ ಸಲಹೆಗಳನ್ನು ನೀಡುತ್ತಾರೆ. ಈ ಮೂಲಕ ಅದೆಷ್ಟೋ ವಿದ್ಯಾರ್ಥಿಗಳಿಗೆ, ವಿಕಲಾಂಗ ವಿದ್ಯಾರ್ಥಿಗಳಿಗೆ ಧೈರ್ಯ ತುಂಬುವ ಕೆಲಸ ಮಾಡುತ್ತಿದ್ದಾರೆ.

Leave a Reply

Your email address will not be published. Required fields are marked *