ಒಮ್ಮೆ ನಾಲ್ಕು ಜನ ಪಾಂಡವರು ಯುಧಿಷ್ಠಿರನನ್ನು ಹೊರತುಪಡಿಸಿ ಕೃಷ್ಣನನ್ನು ಪ್ರಶ್ನಿಸಿದರು, ಕಲಿಯುಗವೆಂದರೇನು ಮತ್ತು ಕಲಿಯುಗದಲ್ಲಿ ಏನು ಜರುಗುತ್ತದೆ.

ಕೃಷ್ಣನು ಮುಗುಳ್ನಕ್ಕು, ನಾನು ನಿಮಗೆ ಕಲಿಯುಗದ ಪರಿಸ್ಥಿತಿ ಹೇಗಿರುತ್ತದೆಂದು ತೋರಿಸುತ್ತೇನೆ ಎಂದು ಹೇಳಿದ, ಶ್ರೀ ಕೃಷ್ಣನು ಬಿಲ್ಲು ಬಾಣಗಳನ್ನು ತೆಗೆದುಕೊಂಡು ನಾಲ್ಕು ಬಾಣಗಳನ್ನು ನಾಲ್ದೆಸೆಗಳಿಗೆ ಹೊಡೆದು ಆ ನಾಲ್ಕು ಜನ ಪಾಂಡವರಿಗೆ ಆ ಬಾಣಗಳನ್ನು ತೆಗೆದುಕೊಂಡು ಬರಲು ಹೇಳಿದ, ಆ ನಾಲ್ವರೂ ಬಾಣಗಳನ್ನು ಹುಡುಕಲು ತಲಾ ಒಂದೊಂದು ದಿಕ್ಕಿಗೆ ತೆರಳಿದರು.

ಅರ್ಜುನನು ತನಗೆ ಸಿಕ್ಕ ಬಾಣವನ್ನು ಕೈಗೆತ್ತಿಕೊಳ್ಳುತ್ತಿದ್ದಾಗ ಅವನಿಗೆ ಒಂದು ಮಧುರವಾದ ಸ್ವರವು ಕೇಳಿಸಿತು, ಅವನು ತಿರುಗಿ ನೋಡಿದಾಗ ಒಂದು ಕೋಗಿಲೆಯು ಸಮ್ಮೋಹನಗೊಳಿಸುವ ಸ್ವರದಲ್ಲಿ ಹಾಡುತ್ತಿತ್ತು ಅದರೊಂದಿಗೆ ಜೀವಂತವಿದ್ದ ಮತ್ತು ಯಾತನೆಯನ್ನು ಅನುಭವಿಸುತ್ತಿದ್ದ ಒಂದು ಮೊಲದ ಮಾಂಸವನ್ನು ಆ ಕೋಗಿಲೆಯು ಕುಕ್ಕಿ ಕುಕ್ಕಿ ತಿನ್ನುತ್ತಿತ್ತು. ಅಂತಹ ದಿವ್ಯ ಪಕ್ಷಿಯು ಮಾಡುತ್ತಿದ್ದ ಹೇಯವಾದ ಕಾರ್ಯವನ್ನು ನೋಡಿ ಅದನ್ನು ಭರಿಸಲಾಗದೆ ಅರ್ಜುನನು ಜಿಗುಪ್ಸೆಗೊಂಡು ಅಲ್ಲಿಂದ ತಕ್ಷಣವೇ ಹೊರಟುಹೋದ.

ಭೀಮನು ಐದು ಬಾವಿಗಳಿರುವಂತಹ ಒಂದು ಸ್ಥಳದಿಂದ ಬಾಣವನ್ನು ಎತ್ತಿಕೊಂಡ, ನಾಲ್ಕು ಬಾವಿಗಳು ಒಂದು ಬಾವಿಯ ಸುತ್ತಲೂ ಇದ್ದವು. ಆ ನಾಲ್ಕೂ ಬಾವಿಗಳು ಸಿಹಿಯಾದ ನೀರಿನಿಂದ ತುಂಬಿ ತುಳುಕುತ್ತಾ ತಮ್ಮಲ್ಲಿರುವ ನೀರನ್ನು ಹಿಡಿದಿಟ್ಟುಕೊಳ್ಳಲಾಗದೆ ಉಕ್ಕಿ ಹರಿಯುತ್ತಿದ್ದವು, ಆದರೆ ಆಶ್ಚರ್ಯಕರವಾಗಿ ಮಧ್ಯದಲ್ಲಿರುವ ಬಾವಿಯು ಸಂಪೂರ್ಣವಾಗಿ ಬರಿದಾಗಿತ್ತು. ಭೀಮನೂ ಸಹ ಆ ದೃಶ್ಯವನ್ನು ನೋಡಿ ಸೋಜಿಗಗೊಂಡ.

ನಕುಲನೂ ಸಹ ತನಗೆ ಸಿಕ್ಕ ಬಾಣವನ್ನು ಎತ್ತಿಕೊಂಡು ಹಿಂದಿರುಗಿ ಬರುತ್ತಿದ್ದ ಒಂದು ಸ್ಥಳದಲ್ಲಿ ಹಸುವೊಂದು ಕರುವಿಗೆ ಜನ್ಮ ನೀಡುತ್ತಿದ್ದ ಸ್ಥಳದಲ್ಲಿ ನಿಂತುಕೊಂಡ ಕರು ಹಾಕಿದ ತಕ್ಷಣ ಆ ಹಸುವು ತನ್ನ ಕಂದನ ಮೈಯನ್ನು ನೆಕ್ಕತೊಡಗಿತು. ಹಾಗೆ ನೆಕ್ಕುವ ಮೂಲಕ ಕರುವಿನ ಶರೀರವು ಸ್ವಚ್ಛಗೊಂಡ ಬಳಿಕವೂ ಹಸುವು ಕರುವನ್ನು ನೆಕ್ಕುವುದನ್ನು ಮುಂದುವರೆಸಿತು. ಅದರಿಂದಾಗಿ ಆ ಕರುವಿನ ಚರ್ಮ ಕಿತ್ತುಹೋಗುವಂತಾಯಿತು, ಆದರೂ ಸಹ ಆ ತಾಯಿ ಹಸು ಕರುವನ್ನು ನೆಕ್ಕುವುದನ್ನು ಬಿಡಲಿಲ್ಲ ಅದನ್ನು ಗಮನಿಸಿದ ಕೆಲವು ಜನ ಬಹಳ ಕಷ್ಟಪಟ್ಟು ಆ ಹಸು ಕರುಗಳನ್ನು ಬೇರ್ಪಡಿಸಿದರು, ನಕುಲನಿಗೂ ಸಹ ಹಸುವಿನಂತಹ ಸಾಧು ಪ್ರಾಣಿಯ ವರ್ತನೆಯು ಆಶ್ಚರ್ಯವನ್ನುಂಟು ಮಾಡಿತು.

ಸಹದೇವನು ತನ್ನ ಬಾಣವನ್ನು ಪರ್ವತವೊಂದರ ಹತ್ತಿರದಿಂದ ಎತ್ತಿಕೊಂಡ, ಅಲ್ಲಿ ಮೇಲಿನಿಂದ ಕೆಳಗೆ ಉರುಳುತ್ತಿದ್ದ ಬೃಹತ್ ಬಂಡೆಯೊಂದನ್ನು ನೋಡಿದ ಉರುಳುತ್ತಿದ್ದ ಆ ಹೆಬ್ಬಂಡೆಯು ತನ್ನ ಅಡಿಗೆ ಸಿಕ್ಕ ದೊಡ್ಡ ದೊಡ್ಡ ಬಂಡೆಗಳನ್ನು ಸಹ ಪುಡಿಪುಡಿ ಮಾಡುತ್ತಾ, ಬೃಹದಾಕಾರದ ಮರಗಳನ್ನು ನೆಲಕ್ಕೆ ಒರಗುವಂತೆ ಮಾಡುತ್ತಿತ್ತು, ಅಂತಹ ಬಂಡೆಯು ಒಂದು ಚಿಕ್ಕ ಗಿಡವು ಅಡ್ಡ ಬಂದುದರಿಂದ ನಿಂತುಕೊಂಡಿತು, ಸಹಜವಾಗಿಯೇ ಸಹದೇವನೂ ಸಹ ಈ ಸೋಜಿಗವನ್ನು ನೋಡಿ ಅಚ್ಚರಿಗೊಂಡ.

ಎಲ್ಲ ಪಾಂಡವರೂ ತಾವು ಕಂಡ ಸಂಗತಿಗಳ ಕುರಿತು ಕೃಷ್ಣನಿಗೆ ಹೇಳಿ ಅವನಿಂದ ವಿವರಣೆಯನ್ನು ಬಯಸಿದರು, ಕೃಷ್ಣನು ನಸುನಕ್ಕು ಅವುಗಳನ್ನು ವಿವರಿಸತೊಡಗಿದ, ಕಲಿಯುಗದಲ್ಲಿ ಪುರೋಹಿತರು ಬಹಳ ಮಧುರವಾದ ಧ್ವನಿಯನ್ನು ಹೊಂದಿರುತ್ತಾರೆ ಮತ್ತು ಬಹಳ ಉನ್ನತವಾದ ಜ್ಞಾನವನ್ನೂ ಹೊಂದಿರುತ್ತಾರೆ ಆದರೂ ಸಹ ಆ ಕೋಗಿಲೆಯು ಮೊಲವನ್ನು ಕಿತ್ತು ತಿಂದಂತೆ ಅವರು ಭಕ್ತರನ್ನು ಸುಲಿದು, ಪೀಡಿಸುತ್ತಾರೆ.

ಕಲಿಯುಗದಲ್ಲಿ ಬಡವರು ಶ್ರೀಮಂತರ ಮಧ್ಯೆಯೇ ಬದುಕುತ್ತಾರೆ ಮತ್ತು ಆ ಶ್ರೀಮಂತರು ತುಂಬಿ ತುಳುಕುವಷ್ಟು ಧನಕನಕಗಳನ್ನು ಹೊಂದಿರುತ್ತಾರೆ; ಆದರೂ ಸಹ ಅವರು ಬಡವರಿಗೆ ಬಿಡಿಗಾಸನ್ನೂ ಕೊಡುವುದಿಲ್ಲ, ಆ ತುಂಬಿ ಹರಿಯುತ್ತಿದ್ದ ನಾಲ್ಕು ಬಾವಿಗಳಂತೆ ಬರಿದಾದ ಬಾವಿಗೆ ಅವರು ನೀರುಣಿಸುವುದಿಲ್ಲ.

ಕಲಿಯುಗದಲ್ಲಿ ತಾಯ್ತಂದೆಯರು ತಮ್ಮ ಮಕ್ಕಳನ್ನು ಎಷ್ಟು ಪ್ರೀತಿಸುತ್ತಾರೆಂದರೆ ಅವರ ಮಮಕಾರವು ಮಕ್ಕಳನ್ನು ಹಾಳುಮಾಡುವುದಷ್ಟೇ ಅಲ್ಲ ಅವರ ಜೀವನವನ್ನೂ ನಾಶಮಾಡುತ್ತದೆ; ಆ ಆಕಳು ತನ್ನ ಕರುವಿನ ಮೇಲೆ ತೋರಿಸಿದ ಮಮತೆಯಂತೆ.

ಕಲಿಯುಗದಲ್ಲಿ ಪರ್ವತದ ಮೇಲಿಂದ ಬೀಳುವ ಹೆಬ್ಬಂಡೆಯಂತೆ ಜನರು ತಮ್ಮ ಸುಗುಣಗಳನ್ನು ಕಳಚಿಕೊಂಡು ಅಧಃಪತನಕ್ಕೆ ಬೀಳುತ್ತಾರೆ ಮತ್ತು ಅವರನ್ನು ತಡೆಯಲು ಯಾರಿಂದಲೂ ಸಾಧ್ಯವಾಗುವುದಿಲ್ಲ; ಆದರೆ ಅಂತಿಮವಾಗಿ ಭಗವನ್ನಾಮ ಸ್ಮರಣೆ ಮಾತ್ರ ಅವರನ್ನು ಆ ಪುಟ್ಟ ಗಿಡದಂತೆ ಕೆಳಗೆ ಜಾರದಂತೆ ಹಿಡಿದು ರಕ್ಷಿಸುತ್ತದೆ.

Leave a Reply

Your email address will not be published. Required fields are marked *