ಒಬ್ಬ ವ್ಯಕ್ತಿ ಆಸಕ್ತಿ ತೋರಿದರೆ ಏನು ಬೇಕಾದರೂ ಬದಲಾವಣೆ ತರಬಹುದು ಎಂಬುದಕ್ಕೆ ಈ ಎಂಟು ವರ್ಷದ ವಿದ್ಯಾರ್ಥಿಯೇ ಉದಾಹರಣೆಯಾಗಿದ್ದು, ಈತನ ಕೋರ್ಟ್ ಹೋರಾಟದಿಂದಾಗಿ ರಾಜ್ಯದ ಎಲ್ಲ ಶಾಲಾ ವಿದ್ಯಾರ್ಥಿಗಳಿಗೆ ಇದೀಗ ಎರಡು ಜೊತೆ ಸಮವಸ್ತ್ರ ಸಿಗುವಂತಾಗಿದೆ.

ಎರಡು ಜೊತೆ ಸಮವಸ್ತ್ರ ನೀಡುವುದಾಗಿ ಹೇಳಿದ್ದ ಸರ್ಕಾರ 2019-20ರ ಶೈಕ್ಷಣಿಕ ವರ್ಷದಲ್ಲಿ ಒಂದೇ ಜೊತೆ ನೀಡಿತ್ತು. ಸರ್ಕಾರದ ಕ್ರಮ ಖಂಡಿಸಿ, ಕೊಪ್ಪಳ ಜಿಲ್ಲೆ ಕಿನ್ನಾಳ ಗ್ರಾಮದ ದೇವಪ್ಪ ಬಸಪ್ಪ ಹರಿಜನ ಅವರ ಪುತ್ರ ಎಂಟು ವರ್ಷದ ಮಂಜುನಾಥ್ ಹೈಕೋರ್ಟ್‍ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿ ಕಾನೂನು ಹೋರಾಟ ನಡೆಸಿದ್ದು, ಅಂತಿಮವಾಗಿ ಹೈ ಕೋರ್ಟ್ ರಾಜ್ಯ ಸರ್ಕಾರಕ್ಕೆ ಛೀ ಮಾರಿ ಹಾಕಿ, ಎರಡು ಜೊತೆ ಸಮವಸ್ತ್ರಗಳನ್ನು ನೀಡುವಂತೆ ಸರ್ಕಾರಕ್ಕೆ ಆದೇಶಿಸಿದೆ.

ಈ ಕುರಿತು ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ಹಾಗೂ ನ್ಯಾ.ಪಿ.ಎಂ.ನವಾಜ್ ಅವರಿದ್ದ ವಿಭಾಗೀಯಪೀಠ ವಿಚಾರಣೆಗೆ ನಡೆಸಿದ್ದು, ಸರ್ಕಾರವನ್ನು ತರಾಟೆ ತಗೆದುಕೊಂಡಿದೆ. ಕಾನೂನು ಉಲ್ಲಂಘನೆ ಅಷ್ಟೇ ಅಲ್ಲ ಇದು ಶುಚಿತ್ವ ಪ್ರಶ್ನೆಯೂ ಆಗಿದೆ. ಈ ವಿಚಾರದಲ್ಲಿ ಸರ್ಕಾರಗಳು ನೆಪ ಹೇಳಬಾರದು ಇಂತಹ ಸಾಮಾನ್ಯ ವಿಚಾರಗಳಿಗೆ ಜನ ಹೈಕೋರ್ಟ್‍ಗೆ ಬರಬೇಕೇ ಎಂದು ನ್ಯಾಯ ಪೀಠ ಸರ್ಕಾರದ ಕ್ರಮದ ವಿರುದ್ಧ ಕಿಡಿ ಕಾರಿದೆ. ಈ ವಿಚಾರದಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳೆರೆಡೂ ಸಮಾನ ಹೊಣೆಗಾರಿಕೆ ಹೊತ್ತು ವಿದ್ಯಾರ್ಥಿಗಳಿಗೆ ಸಮಸವಸ್ತ್ರ ಎರಡು ಜೊತೆ ಸಿದ್ಧಪಡಿಸಿದ ಸಮವಸ್ತ್ರ ವಿತರಿಸಲು ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದೆ. ವಿಧ್ಯಾರ್ಥಿ ಪರವಾಗಿ ವಕೀಲ ಅಂಜಿತ್ ಶೆಟ್ಟಿ ಉಚಿತವಾಗಿ ವಾದ ಮಾಡಿದ್ದರು.

ವಿದ್ಯಾರ್ಥಿಯ ವಾದ ಏನಿತ್ತು: ಸರ್ಕಾರವೇ ಎರಡು ಜೊತೆ ಬಟ್ಟೆಗಳನ್ನು ನೀಡುವದಾಗಿ ಈ ಹಿಂದೆ ಆದೇಶಿಸಿದೆ. ಆದರೆ, ಇದೀಗ ಒಂದು ಜೊತೆ ಸಿದ್ಧಪಡಿಸಿದ ಸಮವಸ್ತ್ರವನ್ನು ಹಾಗೂ ಇನ್ನೊಂದು ಜೊತೆ ಕೇವಲ ಬಟ್ಟೆಯನ್ನು ನೀಡುತ್ತಿದೆ. ಅಲ್ಲದೆ, ಬಹುತೇಕ ಕಡೆ ಸಮವಸ್ತ್ರವನ್ನೇ ನೀಡಿಲ್ಲ. ಆದರೆ ಸರ್ಕಾರದ ಆದೇಶದ ಪ್ರಕಾರ ಎರಡು ಜೊತೆ ಸಿದ್ಧಪಡಿಸಿದ ಸಮವಸ್ತ್ರಗಳನ್ನು ನೀಡಬೇಕು ಎಂಬುದು ವಿದ್ಯಾರ್ಥಿಯ ವಾದವಾಗಿತ್ತು.

2019-20ನೇ ಶೈಕ್ಷಣಿಕ ವರ್ಷದಲ್ಲಿ ಸರ್ಕಾರಿ ಶಾಲೆಗಳಲ್ಲಿ ಪ್ರವೇಶ ಪಡೆದ ಮಕ್ಕಳು ಸೇರಿದಂತೆ RTE ಅಡಿ ಪ್ರವೇಶ ಪಡೆದಿರುವ ಮಕ್ಕಳಿಗೆ ಒಂದು ಜೊತೆ ಸಿದ್ಧಪಡಿಸಿದ ಸಮವಸ್ತ್ರ ಮಾತ್ರ ವಿತರಿಸಲಾಗಿದೆ. ಎರಡನೇ ಜೊತೆಯನ್ನು ಕೇವಲ ಬಟ್ಟೆಯನ್ನು ಮಾತ್ರ ನೀಡಿದೆ, ಇನ್ನೂ ಕೆಲವೆಡೆ ಬಟ್ಟೆಯನ್ನು ಸಹ ನೀಡಿಲ್ಲ. ಇದರಿಂದ ಬಡ ಮಕ್ಕಳು ಹಾಗೂ ಅವರ ಪೋಷಕರಿಗೆ ತೊಂದರೆಯಾಗುತ್ತಿದೆ. ಅಲ್ಲದೇ ಅನೇಕ ಶಾಲೆಗಳಲ್ಲಿ ಇನ್ನೂ ಸಹ ಒಂದು ಜೊತೆ ಸಿದ್ಧಪಡಿಸಿದ ಸಮವಸ್ತ್ರವನ್ನೂ ವಿತರಿಸಿಲ್ಲ. ಈ ನಿಟ್ಟಿನಲ್ಲಿ ಸರ್ಕಾರಕ್ಕೆ ಸೂಕ್ತ ನಿರ್ದೇಶನ ನೀಡಬೇಕು ಎಂದು ವಿದ್ಯಾರ್ಥಿಯ ವಾದವಾಗಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿ ಸರ್ಕಾರ ತೀರ್ಮಾನ ಕೈಗೊಳ್ಳದಿದ್ದರೆ ನ್ಯಾಯಾಲಯವೇ ಆದೇಶ ನೀಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.

ಏನಿದು ಪ್ರಕರಣ: ಸರ್ಕಾರ 2015-16ನೇ ಶೈಕ್ಷಣಿಕ ಸಾಲಿನಿಂದ ಎರಡು ಜೊತೆ ಸಮವಸ್ತ್ರ ನೀಡುವಂತೆ ಆದೇಶ ಹೊರಡಿಸಿತ್ತು. 2015-16ನೇ ಶೈಕ್ಷಣಿಕ ವರ್ಷದಲ್ಲಿ ಎರಡು ಜೊತೆ ಸಮವಸ್ತ್ರ ನೀಡಲಾಗಿತ್ತು. ಆದೇಶ ಹೊರಡಿಸಿದ ವರ್ಷ ಮಾತ್ರ ಸರ್ಕಾರ ಎರಡು ಜೊತೆ ಸಮವಸ್ತ್ರ ನೀಡಿತ್ತು. ನಂತರದ ವರ್ಷಗಳಲ್ಲಿ ಸರ್ಕಾರದ ಆದೇಶವಿದ್ದರೂ ಸಹ ಒಂದೇ ಜೊತೆ ಸಮವಸ್ತ್ರವನ್ನು ನೀಡಲಾಗಿತ್ತು. ಅಲ್ಲದೆ, 2018-19 ಶೈಕ್ಷಣಿಕ ವರ್ಷದಲ್ಲಿ ಮಕ್ಕಳಿಗೆ ಎರಡು ಜೊತೆ ಸಮವಸ್ತ್ರ ನೀಡುವಲ್ಲಿ ಸರ್ಕಾರ ತಕರಾರು ಎತ್ತಿತ್ತು. ಕಳೆದ ವರ್ಷವೂ ಸಹ ಒಂದರಿಂದ ಎಂಟನೆ ತರಗತಿಯ ಸರಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಒಂದೇ ಜೊತೆ ಸಮವಸ್ತ್ರ ನೀಡಿತ್ತು. ಹೀಗಾಗಿ ಸರ್ಕಾರದ ಕ್ರಮ ಪ್ರಶ್ನಿಸಿ ವಿದ್ಯಾರ್ಥಿ ಹೈ ಕೋರ್ಟ್ ಮೆಟ್ಟಿಲೇರಿದ್ದ.

Leave a Reply

Your email address will not be published. Required fields are marked *