ಸೇವಂತಿಗೆ ಈ ಹೂವನ್ನು ಹೆಚ್ಚಾಗಿ ದೇವರ ಪೂಜೆಗೆ ಬಳಸುತ್ತಾರೆ. ಈ ಹೂವು ವರ್ಷವಿಡೀ ರೈತರು ಬೆಳೆಯುತ್ತಾರೆ. ಈ ಹೂವನ್ನು ಆರ್ಥಿಕ ಬೆಳೆಯಾಗಿ ಬೆಳೆಯುತ್ತಾರೆ. ಸೇವಂತಿಗೆಯ ಮೂಲ ಯೂರೋಪ್ ಆಗಿದ್ದರು ಇಂದು ಇಡೀ ಭಾರತದೆಲ್ಲೆಡೆ ಬೆಳೆಯುತ್ತಾರೆ. ಸೇವಂತಿಗೆ ಹೂವು ಬರಿ ಪೂಜೆಗೆ ಮಾತ್ರವಲ್ಲದೆ ಮಾನವನ ಹಲವಾರು ರೋಗಗಳನ್ನು ಹೋಗಲಾಡಿಸಲು ಸಹ ಬೆಳೆಯುತ್ತಾರೆ. ಈ ಸೇವಂತಿಗೆಯ ಗಿಡದ ಎಲೆ, ಹೂವು ಮತ್ತು ಬೇರು ಉಪಯೋಗ ಭಾಗಗಳಾಗಿವೆ.

ಇದು ತಿಕ್ತ ರಸ ಹೊಂದಿದ್ದು ಪಿತ್ತ ಮತ್ತು ಕಫದೋಷಹರವಾಗಿದೆ. ಕೆಮ್ಮು ಇರುವಾಗ ಸೇವಂತಿಗೆ ಎಲೆಗಳ ರಸದಲ್ಲಿ ಜೇನುತುಪ್ಪ ಬೆರೆಸಿ ಸೇವಿಸಬೇಕು. ರಕ್ತಬೇದಿಯಾಗುತ್ತಿದ್ದಲ್ಲಿ ಹೂವುಗಳನ್ನು ಅರೆದು ಸಕ್ಕರೆ ಮತ್ತು ಜೀರಿಗೆ ಪುಡಿ ಬೆರೆಸಿ ಸೇವಿಸಿ ನಂತರ ನೀರು ಕುಡಿಯಬೇಕು.

ಜ್ವರದಿಂದ ಬಳಲುತ್ತಿದ್ದರೆ ಸೇವಂತಿಗೆಯ ಕಾಂಡ ಮತ್ತು ಬೇರಿನ ಕಷಾಯ ತಯಾರಿಸಿ ಅದಕ್ಕೆ ಒಂದು ಚಿಟಿಕೆ ಉಪ್ಪು ಬೆರೆಸಿ ಕುಡಿಯಬೇಕು.ಜಂತುಗಳ ಭಾದೆಯಿದ್ದಲ್ಲಿ ಸೇವಂತಿಗೆಯ ಎಲೆಗಳನ್ನು ಒಣಗಿಸಿ ಪುಡಿ ಮಾಡಿ ಅದರೊಡನೆ ಸ್ವಲ್ಪ ಹಿಂಗು ಬೆರೆಸಿ ಕೊಡಬೇಕು. ಇದನ್ನು ಮೊಊರರಿಂದ ನಾಲ್ಕು ದಿನ ಕೊಟ್ಟು ನಂತರ ಶುದ್ಧವಾದ ಔಡಲ ಎಣ್ಣೆಯನ್ನು ಒಂದು ಚಮಚದಷ್ಟು ಕುಡಿಸಬೇಕು.

ಗಾಯಗಳಾಗಿದ್ದಲ್ಲಿ ಸ್ವಲ್ಪ ಸೇವಂತಿಗೆ ಎಲೆಯನ್ನು ಅರಿಸಿನ ಪುಡಿಯೊಂದಿಗೆ ಅರೆದು ಚಟ್ನಿ ಮಾಡಿ ಲೇಪಿಸಬೇಕು. ಹೊಟ್ಟೆನೋವಿನಿಂದ ಬಳಲುವವರು ಸೇವಂತಿಗೆ ಹೂವಿನ ರಸವನ್ನು ಜೇನಿನಲ್ಲಿ ಬೆರೆಸಿ ಕುಡಿಯಬೇಕು. ಮುಟ್ಟಿನ ಸಮಯದಲ್ಲಿ ಹೊಟ್ಟೆನೋವು ಅಧಿಕವಾಗಿ ಬರುತ್ತಿದ್ದಲ್ಲಿ ಸೇವಂತಿಗೆ ಹೂವಿನ ರಸದ ಸೇವನೆ ಉತ್ತಮ ಫಲ ನೀಡುತ್ತದೆ.

ಮಾನಸಿಕ ಕಾಯಿಲೆಯಿಂದ ಬಳಲುವವರಿಗೂ ಕೂಡ ಇದು ಉತ್ತಮ ಔಷಧಿಯಾಗಿದೆ. ಅರುಚಿ ಮತ್ತು ಆಮ್ಲಪಿತ್ತದಿಂದ ಬಳಲುವವರಿಗೂ ಇದು ಅತ್ಯಂತ ಉಪಯುಕ್ತ. ಬೇಸಿಗೆಯಲ್ಲಿ ಉಂಟಾಗುವ ಅತಿಸಾರಕ್ಕೆ ಸೇವಂತಿಗೆಯ ರಸ ಸೇವನೆ ಉತ್ತಮ ಫಲ ನೀಡುತ್ತದೆ.

Leave a Reply

Your email address will not be published. Required fields are marked *