ದೀರ್ಘಕಾಲಿಕವಾಗಿ ಕಾಡುವ ಚರ್ಮರೋಗಗಳಲ್ಲಿ ಸೋರಿಯಾಸಿಸ್ ಬಹಳ ಮುಖ್ಯವಾದುದ್ದು. ಈ ರೋಗವು ಚರ್ಮವನ್ನು ವಿರೂಪಗೊಳಿಸುತ್ತದೆ. ಆದ್ದರಿಂದ ರೋಗಿ ಸಾಮಾಜಿಕ ಹಾಗೂ ಮಾನಸಿಕ ಖಿನ್ನತೆಗೆ ಒಳಗಾಗುತ್ತ ಸಮಾಜದಿಂದ ವಿಮುಖನಾಗುತ್ತಾನೆ.

ಸೋರಿಯಾಸಿಸ್ ಅಂಟುರೋಗ ಅಥವಾ ಅನುವಂಶಿಕವಾಗಿ ಬರುವ ರೋಗವಲ್ಲ. ಇದೊಂದು ಚರ್ಮದ ಕಾಯಿಲೆ. ಹೆಚ್ಚಾಗಿ 20 ವರ್ಷ ಪ್ರಾಯದವರಲ್ಲಿ ಕಂಡುಬರುತ್ತದೆ.

ಸೋರಿಯಸಿಸ್ ರೋಗದಲ್ಲಿ ಹಲವು ಪ್ರಕಾರಗಳಿದ್ದು, ದೇಹದ ಯಾವುದೇ ಭಾಗದಲ್ಲಿ ಕಾಣಿಸಿಕೊಳ್ಳಬಹುದು. ಸಾಮಾನ್ಯವಾಗಿ ತಲೆಬುರುಡೆಯ ಮೇಲೆ, ಬೆನ್ನು, ಹೊಟ್ಟೆಯಮೇಲೆ ಹಾಗೂ ಮೊಣಕೈ, ಮೊಣಕಾಲುಗಳಲ್ಲಿ ಈ ಚರ್ಮ ವ್ಯಾಧಿ ಕಾಣಿಸಿಕೊಳ್ಳುತ್ತದೆ. ಈ ರೋಗದಲ್ಲಿ ಚರ್ಮ ಕಣಗಳ ಉತ್ಪತ್ತಿಯ ವೇಗವು ಹೆಚ್ಚಾಗಿ ಚರ್ಮವು ಕೆಂಪಾಗಿ, ಒಣಗಿದಂತಾಗುತ್ತದೆ ಅಲ್ಲದೆ ಅತಿಯಾದ ತುರಿಕೆಯೊಂದಿಗೆ ಚರ್ಮದ ಮೇಲ್ಭಾಗದಲ್ಲಿ ಹೊಟ್ಟಿನಂತಹ ಪದರ ಉಂಟಾಗುತ್ತದೆ.

ಸಣ್ಣದೊಂದು ಗುಳ್ಳೆ ಅಥವಾ ಗಾಯದ ಹಾಗೆ ಪ್ರಾರಂಭವಾಗಿ, ಕ್ರಮೇಣ ತನ್ನ ಗಾತ್ರವನ್ನು ವಿಸ್ತಾರಗೊಳಿಸುತ್ತ ದೇಹದ ಇತರ ಭಾಗಗಳಿಗೆ ಹರಡುತ್ತದೆ. ಕೆಲವೊಮ್ಮೆ ಅತಿಯಾಗಿ ಕೆರೆದುಕೊಂಡಾಗ ರಕ್ತ ಬರುವ ಸಾಧ್ಯತೆಯೂ ಇರುತ್ತದೆ. ಚಿಕಿತ್ಸೆ ಪಡೆಯದೆ ಇದ್ದಲ್ಲಿ ಬಹಳ ಸಮಯದ ನಂತರ ಉಗುರುಗಳನ್ನು ಹಾಗೂ ಮೂಳೆಯ ಸಂದಿಗಳನ್ನು ಹಾನಿಮಾಡಿ ಸೋರಿಯಾಟಿಕ್ ಆರ್ಥರೈಟಿಸ್​ಗೆ ಇದು ಕಾರಣವಾಗುತ್ತದೆ.

ಮನೆ ಔಷಧಗಳು:
ಪ್ರತಿದಿನ ಸ್ನಾನಮಾಡಿ, ಚರ್ಮವನ್ನು ಮೆತ್ತನಾಗಿಸುವ ಮುಲಾಮನ್ನು ಲೇಪಿಸಿಮ್ ಗಾಯವಿರುವ ಜಾಗವನ್ನು ರಾತ್ರಿಯ ಸಮಯದಲ್ಲಿ ಮುಚ್ಚಿಡಿ, ಸ್ವಲ್ಪ ಸೂರ್ಯನ ಶಾಖಕ್ಕೆ ಮೈ ಒಡ್ಡಿ

ವ್ಯಾಯಾಮ, ಸರಿಯಾದ ಆಹಾರ ಸೇವಿಸಿ, ಮತ್ತು ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳಿ
ಪ್ರಚೋದನಾ ಕಾರಿ ಅಂಶಗಳ ಟಿಪ್ಪಣಿ ತಯಾರಿಸಿ ಅವುಗಳಿಂದ ದೂರವಿರಿ

ನಿಮ್ಮ ಚರ್ಮದ ತೇವಾಂಶವನ್ನು ಕಾಪಾಡಿಕೊಳ್ಳುವುದು ಅತ್ಯವಶ್ಯಕ, ಆದ್ದರಿಂದ ವರ್ಷದ ಒಣ ಋತುಗಳಲ್ಲಿ ಒಂದು ಆರ್ದ್ರಕ ಬಳಸಿ, ಹುಳಿ, ಸಿಹಿ ಹಾಗೂ ಉಪ್ಪಿನ ಪದಾರ್ಥಗಳನ್ನು ಹೆಚ್ಚು ಸೇವಿಸಬಾರದು

ಬದನೆಕಾಯಿ, ಮೂಲಂಗಿ, ಬೆಂಡೆಕಾಯಿ, ಅಣಬೆ, ಮೀನು, ಮೊಟ್ಟೆ, ಮಾಂಸ, ಬೆಲ್ಲ, ಉದ್ದು, ಹುರುಳಿಕಾಳು, ಪನ್ನೀರ್, ಮೊಸರು ಸೇವಿಸಬಾರದು, ವಾಂತಿ, ಮೂತ್ರ ಹಾಗೂ ಮಲದ ವಿಸರ್ಜನೆಯನ್ನು ತಡೆಯಬಾರದು, ಹಗಲಿನಲ್ಲಿ ನಿದ್ದೆ ಮಾಡಬಾರದು.

ಸುಲಭವಾಗಿ ಜೀರ್ಣವಾಗದ ಆಹಾರವನ್ನು ಸೇವಿಸಬಾರದು ಮತ್ತು ಹಿಂದೆ ಸೇವಿಸಿದ ಆಹಾರ ಜೀರ್ಣ ಆಗುವ ಮೊದಲೇ ಮತ್ತೆ ಆಹಾರವನ್ನು ಸೇವಿಸಬಾರದು.

ಬಿಸಿಲಿನಲ್ಲಿ ಆಯಾಸಗೊಂಡ ನಂತರ ತಕ್ಷಣ ತಣ್ಣನೆಯ ನೀರು, ತಂಪುಪಾನೀಯಗಳ ಸೇವನೆ ಮತ್ತು ತಣ್ಣೀರಿನ ಸ್ನಾನ ಮಾಡಬಾರದು.

ಬಾಳೆಹಣ್ಣು, ಮಾವಿನಹಣ್ಣು, ಸೀತಾಫಲ, ಹಲಸಿನಹಣ್ಣು ಹಾಗೂ ಕಿತ್ತಳೆ ಹಣ್ಣಿನ ಸೇವನೆ ಬೇಡ.
ಅವಶ್ಯಾನುಸಾರ ಶುದ್ಧವಾದ ನೀರು, ಎಳನೀರು, ಮಜ್ಜಿಗೆ, ಗಂಜಿ ಸೇವಿಸುವುದು ಉತ್ತಮ.

ಸೌತೆಕಾಯಿ, ಬೂದಗುಂಬಳಕಾಯಿ, ಹಾಗಲಕಾಯಿ, ಪಡುವಲಕಾಯಿ, ಸೋರೆಕಾಯಿ, ಹೀರೆಕಾಯಿ, ಒಂದಲಗ ಬಳಸಿದರೆ ಒಳ್ಳೆಯದು. ಹೆಸರುಕಾಳು, ಹೆಸರುಬೇಳೆ, ಗೋಧಿ, ಕೆಂಪುಅಕ್ಕಿ, ಹಳೇ ಅಕ್ಕಿಯ ಸೇವನೆ ಉತ್ತಮ.

ಅರಿಶಿಣ, ನೆಲ್ಲಿಕಾಯಿ, ಕಲ್ಲಂಗಡಿ, ಪಪ್ಪಾಯ ಬಳಸಬೇಕು. ನಿತ್ಯ ತೈಲ ಅಭ್ಯಂಜನ, ನಿತ್ಯ ಸ್ನಾನ, ಸಮಯಕ್ಕೆ ತಕ್ಕ ಹಿತಕರ ಆಹಾರ ಸೇವನೆ ಯೋಗ , ಪ್ರಾಣಾಯಾಮ ಇವೆಲ್ಲವೂ ಸೋರಿಯಾಸಿಸ್ ತಡೆಗಟ್ಟಲು ಸಹಕಾರಿ.

Leave a Reply

Your email address will not be published. Required fields are marked *