ಹೌದು ಯುವಜನಾಂಗಕ್ಕೆ ಮಾದರಿಯಾಗಿರುವ ಇವರ ಹೆಸರು ರಮೇಶ್ ಗೋಪಾಲ್. ಹಿಂದೊಮ್ಮೆ ಇವರಿಂದ ಬಳೆ ಹಾಕಿಸಿಕೊಂಡವರೀಗ ಅದೇ ಕೈ ಎತ್ತಿ ಸೆಲ್ಯೂಟ್ ಹೊಡಿಯುತ್ತಿದ್ದಾರೆ.

ಮನುಷ್ಯ ಪರಿಶ್ರಮದಿಂದ ಏನನ್ನು ಬೇಕಾದರೂ ಸಾಧಿಸಲು ಸಾಧ್ಯ. ಯಾರಿಂದಲೂ ಅವನನ್ನು ತಡೆಯಲು ಅಸಾಧ್ಯ ಎನ್ನುತ್ತಾರೆ. ಇದು ಸಹ ಅಂತಹದ್ದೇ ಒಬ್ಬ ಪ್ರಯತ್ನಶೀಲನ ಯಶೋಗಾಥೆ. ಅವನು ಬಣ್ಣ ಬಣ್ಣದ ಬಳೆಗಳನ್ನು ಮಾರಿ ಜೀವನ ಸಾಗಿಸುತ್ತಿದ್ದ, ಆದರವನಿಗೆ ಬಣ್ಣ ಬಣ್ಣದ ಕನಸುಗಳೇನೂ ಇರಲಿಲ್ಲ. ಅವನಿಗಿದ್ದುದು ಒಂದೇ ಕನಸಾಗಿತ್ತು. ಆ ಕನಸನ್ನು ನನಸು ಮಾಡಲು ಹಗಲಿರುಳು ಚಿಂತಿಸುತ್ತಿದ್ದ. ಅಷ್ಟೇ ಅಲ್ಲ ಆ ದಿಶೆಯಲ್ಲಿ ಪ್ರಯತ್ನಿಸುತ್ತಿದ್ದ. ಮತ್ತೀಗ ಆತ ಗೆದ್ದಿದ್ದಾನೆ. ಬಳೆಗಾರನಾಗಿದ್ದವ IAS ಅಧಿಕಾರಿಯಾಗಿದ್ದಾನೆ.

ಹೌದು ಯುವಜನಾಂಗಕ್ಕೆ ಮಾದರಿಯಾಗಿರುವ ಇವರ ಹೆಸರು ರಮೇಶ್ ಗೋಪಾಲ್. ಹಿಂದೊಮ್ಮೆ ಇವರಿಂದ ಬಳೆ ಹಾಕಿಸಿಕೊಂಡವರೀಗ ಅದೇ ಕೈ ಎತ್ತಿ ಸೆಲ್ಯೂಟ್ ಹೊಡಿಯುತ್ತಿದ್ದಾರೆ.

ರಮೇಶ್ ಗೋಪಾಲ್ ಕಡು ಬಡತನದಲ್ಲಿ ಬೆಂದವರು. ಅಷ್ಟೇ ಅಲ್ಲ ಪೊಲೀಯೋಗೆ ಬಲಿಯಾದವರು. ಅವರ ಕಥೆಯನ್ನು ಕೇಳಿದರೆ ಎಂತವರ ಕಣ್ಣಲ್ಲೂ ನೀರು ಉಕ್ಕುತ್ತದೆ. ತಾಯಿ ರಸ್ತೆ ಬದಿ ಬಳೆ ಮಾರುತ್ತಿದ್ದರು. ರಮೇಶ್ ತಾಯಿ ಕೆಲಸಕ್ಕೆ ನೆರವಾಗುತ್ತಿದ್ದರು. ಬದುಕನ್ನು ಉಡುಗಿಸುವಷ್ಟು ಸಮಸ್ಯೆಗಳಿದ್ದರೂ ರಮೇಶ್ ಎಂದಿಗೂ ಅಳುಕಲಿಲ್ಲ.

ಅವರ ತಂದೆಯದ್ದು ಚಿಕ್ಕ ಸೈಕಲ್ ಅಂಗಡಿ ಇತ್ತು. ಆದರೆ ಅವರು ದುಡಿದದ್ದನ್ನೆಲ್ಲ ಮದ್ಯಕ್ಕೆ ಸುರಿಯುತ್ತಿದ್ದರು. ಹೀಗಾಗಿ ಜೀವನ ನಿರ್ವಹಣೆ ಕಷ್ಟವಾಗಿತ್ತು. ಶಿಕ್ಷಣವನ್ನು ಮುಂದುವರಿಸಲು ರಮೇಶ್ ತಮ್ಮ ಚಿಕ್ಕಪ್ಪನ ಮನೆಗೆ ಹೊರಟು ಹೋದರು. 12 ತರಗತಿಯನ್ನು 88. 5% ಅಂಕಗಳೊಂದಿಗೆ ಉತ್ತೀರ್ಣರಾದರು. ಅದರ ಬೆನ್ನಲ್ಲೇ ತಂದೆ ಸಾವನ್ನಪ್ಪಿದರು. ಬಳಿಕ ಶಿಕ್ಷಣ ವಿಷಯದಲ್ಲಿ ಡಿಪ್ಲೋಮಾ ಓದಿ ಶಾಲೆಯೊಂದರಲ್ಲಿ ಶಿಕ್ಷಕರಾದರು.

ಡಿಪ್ಲೋಮಾ ಮಾಡುವಾಗ ಅವರು ಪದವಿ ಸಹ ಓದಿದ್ದರು. ಶಿಕ್ಷಕ ವೃತ್ತಿಯಲ್ಲಿದ್ದು ಕುಟುಂಬ ನಿರ್ವಹಣೆ ಮಾಡುತ್ತಿದ್ದ ಅವರ ಗುರಿ ಬೇರೆಯೇ ಆಗಿತ್ತು. ಹೀಗಾಗಿ ಕೆಲಸ ಬಿಟ್ಟು UPSC‌ಗಾಗಿ ಸಿದ್ಧತೆ ನಡೆಸಿದರು. ಆದರೆ ಮೊದಲ ಯತ್ನದಲ್ಲಿ ಗೆಲ್ಲಲಾಗಲಿಲ್ಲ. ಬಡತನದಿಂದಾಗಿ ಕೋಚಿಂಗ್ ಪಡೆದುಕೊಳ್ಳುವ ಸ್ಥಿತಿಯಲ್ಲಿ ಅವರಿರಲಿಲ್ಲ. ಆದರೆ ಮಗನ ಕನಸನ್ನು ನನಸು ಮಾಡಲೇ ಬೇಕೆಂಬ ಹಠಕ್ಕೆ ಬಿದ್ದ ತಾಯಿ ಗ್ರಾಮದ ಜನರಿಂದ ಸಾಲ ಪಡೆದು ಮಗನನ್ನು ಪುಣೆಗೆ ಹೋಗಿ ಸಿವಿಲ್ ಸರ್ವೀಸ್ ಪರೀಕ್ಷೆಗೆ ತಯಾರಿ ನಡೆಸಿದರು.

ನಾನು ಬಹುದೊಡ್ಡ ಅಧಿಕಾರಿಯಾಗುವವರೆಗೆ ನಿಮಗೆ ಮುಖ ತೋರಿಸುವುದಿಲ್ಲವೆಂದು ಅವರು ಗ್ರಾಮದ ಜನರ ಮುಂದೆ ಶಪಥ ಮಾಡಿದ್ದರು. 2012ರಲ್ಲಿ ಅವರ ಪರಿಶ್ರಮ ಫಲ ಕೊಟ್ಟಿತು. 287ನೇ ಶ್ರೇಯಾಂಕ ಪಡೆದು ಅವರು ಐಎಎಸ್ ಪಾಸಾದರು. ಸದ್ಯ ಅವರು ಝಾರ್ಖಂಡ್‌ನಲ್ಲಿ ಉಪ-ವಿಭಾಗೀಯ ಮ್ಯಾಜಿಸ್ಟ್ರೇಟ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಕೃಪೆ ವಿಜಯ ಕರ್ನಾಟಕ.

Leave a Reply

Your email address will not be published. Required fields are marked *