ಜನಸಾಮಾನ್ಯರು ತಾವು ಕಷ್ಟಪಟ್ಟು ಸಂಪಾದಿಸಿ ಉಳಿಸುವ ಹಣವನ್ನು ದೀರ್ಘಾವಧಿಗೆ ಹೂಡಿಕೆ ಮಾಡಿ ಗರಿಷ್ಠ ಲಾಭ ಪಡೆಯುವಂತಾಗಲು ಸರಕಾರವೇ ರೂಪಿಸಿರುವ ಸುಭದ್ರ ಮತ್ತು ಆಕರ್ಷಕ ಯೋಜನೆಗಳು ಕೆಲವಿವೆ. ಅವುಗಳಲ್ಲಿ ಪಿಪಿಎಫ್ ಅಥವಾ ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಕೂಡ ಒಂದು.

ಟಾಪ್ ಟೆನ್ ಹೂಡಿಕೆ ಅವಕಾಶಗಳಲ್ಲಿ ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಅಥವಾ ಪಿಪಿಎಫ್ ಅತ್ಯಾಕರ್ಷಕವಾಗಿದ್ದು ಇದು ಮಧ್ಯಮ ವರ್ಗದ, ತಿಂಗಳ ಸಂಬಳದ ಆದಾಯ ಹೊಂದಿರುವ ನೌಕರ ವರ್ಗಕ್ಕೆ ದೊಡ್ಡ ವರದಾನದ ರೂಪದಲ್ಲಿ ಸರಕಾರ ರೂಪಿಸಿರುವ 15 ವರ್ಷಗಳ ದೀರ್ಘಾವಧಿಯ ಯೋಜನೆಯಾಗಿದೆ.

ಈ ಯೋಜನೆಯ ವಿಶೇಷತೆ ಎಂದರೆ ಇದರಲ್ಲಿ ಹೂಡಲ್ಪಡುವ ಹಣದ ಮೇಲಿನ ಬಡ್ಡಿಯು ತೆರಿಗೆ ಮುಕ್ತವಾಗಿರುತ್ತದೆ. ಯೋಜನೆಯಡಿ ಸಾಗುತ್ತಾ ವರ್ಷಗಳು ಉರುಳಿದಂತೆ ಬಡ್ಡಿ ಆದಾಯ ಅಸಲಿನೊಡನೆ ಸೇರಿಕೊಂಡು ದೊಡ್ಡ ಮೊತ್ತಕ್ಕೆ ಬೆಳೆಯುವ ಪರಿ ಅನನ್ಯವಾಗಿದೆ. ಈ ಯೋಜನೆಯಲ್ಲಿ ಜನ ಸಾಮಾನ್ಯರು, ಉದ್ಯೋಗ ವರ್ಗದವರು ಹೂಡುವ ಅಸಲು ಮತ್ತು ಬಡ್ಡಿಗೆ ಸರಕಾರದ ಭದ್ರತೆ ಇದೆ. ಇದನ್ನೇ ಸಾವರೀನ್ ಗ್ಯಾರಂಟಿ ಎಂದು ಹೇಳುವುದು.

ಕೇಂದ್ರ ಸರಕಾರದ ಹಣಕಾಸು ಸಚಿವಾಲಯವು ಪ್ರತೀ ತ್ರೈ ಮಾಸಿಕದಲ್ಲಿ ಪಿಪಿಎಫ್ ಮೇಲಿನ ಬಡ್ಡಿ ದರವನ್ನು ಪ್ರಕಟಿಸುತ್ತದೆ. 2018ರ ಅಕ್ಟೋಬರ್ 1ರಿಂದ ಜಾರಿಗೆ ಬಂದಿರುವಂತೆ ಪಿಪಿಎಫ್ ಮೇಲಿನ ಬಡ್ಡಿ ದರ ಈಗ ಶೇ.8.00 ಇದೆ. ಇದು ವಾರ್ಷಿಕ ನೆಲೆಯಲ್ಲಿ ಚಕ್ರಬಡ್ಡಿಯ ಇಳುವರಿಯನ್ನು ನೀಡುತ್ತದೆ. ಪ್ರತೀ ವರ್ಷ ಮಾರ್ಚ್ 31ರಂದು ಪಿಪಿಎಫ್ ಬಡ್ಡಿ ಹಣ ಪಾವತಿಯಾಗುತ್ತದೆ.

ಜನಸಾಮಾನ್ಯರು ತಿಳಿದಿರುವಂತೆ ಪಿಪಿಎಫ್ ಅಥವಾ ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಖಾತೆಯನ್ನು ಕೇವಲ ಪೋಸ್ಟ್ ಆಫೀಸುಗಳಲ್ಲಿ ಮತ್ತು ಭಾರತೀಯ ಸ್ಟೇಟ್ ಬ್ಯಾಂಕ್ ಮಾತ್ರವಲ್ಲದೆ ಇನ್ನೂ ಹಲವು ಬ್ಯಾಂಕುಗಳಲ್ಲಿ ಪಿಪಿಎಫ್ ಖಾತೆ ತೆರೆಯುವುದಕ್ಕೆ ಅವಕಾಶ ಇರುತ್ತದೆ.

ಭಾರತೀಯ ಸ್ಟೇಟ್ ಬ್ಯಾಂಕ್ ನಲ್ಲಿ ಪಿಪಿಎಫ್ ಖಾತೆದಾರರಿಗೆ ಅತ್ಯಾಕರ್ಷಕ ಬಡ್ಡಿ ಇದೆ. ಪ್ರಕೃತ ಅದು ವಾರ್ಷಿಕ ಶೇ.8.7ರ ಪ್ರಮಾಣದಲ್ಲಿದೆ. ಬಡ್ಡಿ ಆದಾಯವು ಸಂಪೂರ್ಣವಾಗಿ ತೆರಿಗೆ ಮುಕ್ತವಾಗಿರುವುದರಿಂದ ಮತ್ತು ಇದು ಅಸಲಿನೊಡನೆ ಸೇರಿಕೊಳ್ಳುವುದರಿಂದ ಯೋಜನೆಯ 15 ವರ್ಷಗಳ ಅವಧಿಯಲ್ಲಿ ಇದು ಗಮನಾರ್ಹ ಮೊತ್ತಕ್ಕೆ ಬೆಳೆದಿರುತ್ತದೆ.

SBI ಹಾಗೆ ಐಸಿಐಸಿ ಬ್ಯಾಂಕ್, ಪಂಜಾಬ್ ನ್ಯಾಶನಲ್ ಬ್ಯಾಂಕ್, ಬ್ಯಾಂಕ್ ಆಫ್ ಬರೋಡ ಮೊದಲಾದ ಬ್ಯಾಂಕುಗಳು ಪಿಪಿಎಫ್ ಗೆ ಆಕರ್ಷಕ ಬಡ್ಡಿ ನೀಡುತ್ತವೆ.

ಪಿಪಿಎಫ್ ಯೋಜನೆಯ ಅವಧಿ 15 ವರ್ಷಗಳದ್ದಾಗಿರುತ್ತದೆ. ಆದರೆ ಹೂಡಿದ ಹಣ ಮೂರು ವರ್ಷ ಕಳೆದ ಬಳಿಕದಲ್ಲಿ ಆಂಶಿಕ ಮೊತ್ತ ಹಿಂಪಡೆತಕ್ಕೆ ಅವಕಾಶ ಇರುತ್ತದೆ. ವರ್ಷವೊಂದರಲ್ಲಿ 12 ಕಂತುಗಳಲ್ಲಿ ಈ ಯೋಜನೆಯಲ್ಲಿ ಹಣ ಹೂಡಬಹುದಾಗಿರುತ್ತದೆ. ವರ್ಷವೊಂದರಲ್ಲಿ ಕಡ್ಡಾಯವಾಗಿ ಕನಿಷ್ಠ 500 ರೂ. ಹೂಡಲೇ ಬೇಕಾಗಿರುತ್ತದೆ.

ಖಾತೆಯನ್ನು ಚಾಲ್ತಿಯಲ್ಲಿಡಲು. ತಿಂಗಳ ಸಂಬಳದ ಉದ್ಯೋಗಿ ವರ್ಗದವರಿಗೆ ಈ ಯೋಜನೆಯಡಿ ವರ್ಷಕ್ಕೆ 1.50 ಲಕ್ಷ ರೂ. ವರೆಗಿನ ಹೂಡಿಕೆಗೆ ಸೆ.80ಸಿ ತೆರಿಗೆ ವಿನಾಯಿತಿ ಇರುತ್ತದೆ.

ಪಿಪಿಎಫ್ ಖಾತೆಯಲ್ಲಿ ಹಣಕಾಸು ವರ್ಷವೊಂದರಲ್ಲಿ ಖಾತೆದಾರರು ಹೂಡಬಹುದಾದ ಗರಿಷ್ಠ ಮೊತ್ತ 1.50 ಲಕ್ಷ ರೂ ಆಗಿರುತ್ತದೆ. ಈ ಮಿತಿಯನ್ನು ಮೀರಿ ಹೂಡುವ ಹಣಕ್ಕೆ ಬಡ್ಡಿಯೂ ಸಿಗುವುದಿಲ್ಲ; ತೆರಿಗೆ ವಿನಾಯಿತಿಯೂ ಸಿಗುವುದಿಲ್ಲ ಎನ್ನುವುದನ್ನು ಅವಶ್ಯವಾಗಿ ತಿಳಿದಿರಬೇಕು.

1.50 ಲಕ್ಷ ರೂ.ವರೆಗಿನ ಹೂಡಿಕೆಗೆ ಮಾತ್ರವೇ ಸೆ.80ಸಿ ಅಡಿ ತೆರಿಗೆ ವಿನಾಯಿತಿ ಇರುವುದು ಮತ್ತು ಶಾರ್ಟ್ ಟರ್ಮ್ (ಶೇ.15) ಮತ್ತು ಲಾಂಗ್ ಟರ್ಮ್ (ಶೇ.10) ಕ್ಯಾಪಿಟಲ್ ಗೇನ್ಸ್ ಟ್ಯಾಕ್ಸ್ ಇರುತ್ತದೆ. ಕೃಪೆ: ಉದಯವಾಣಿ

Leave a Reply

Your email address will not be published. Required fields are marked *