ಬಹುಕೋಟಿ ರಫೇಲ್ ಯುದ್ಧ ವಿಮಾನ ಖರೀದಿ ಹಗರಣದ ಸಂಬಂಧ ತನಿಖೆಗೆ ಆದೇಶ ನೀಡಲ್ಲ ಎಂದು ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದೆ. ಈ ಮೂಲಕ ಪ್ರಧಾನಿ ಮೋದಿಗೆ ಬಿಗ್ ರಿಲೀಫ್ ಸಿಕ್ಕಿದ್ದು, ಕಾಂಗ್ರೆಸ್ಸಿಗೆ ಭಾರೀ ಮುಖಭಂಗವಾಗಿದೆ.
ರಫೇಲ್ ಖರೀದಿ ವ್ಯವಹಾರಗಳನ್ನು ನಿಯಮದಡಿಯಲ್ಲಿಯೇ ಮಾಡಲಾಗಿದೆ. ಯುದ್ಧ ವಿಮಾನ ಖರೀದಿಯಲ್ಲಿ ಯಾವುದೇ ರೀತಿಯ ಅವ್ಯವಹಾರ ಕಂಡುಬಂದಿಲ್ಲ. ಈ ಕಾರಣಕ್ಕೆ ತನಿಖೆ ನಡೆಸಲು ಆದೇಶ ನೀಡುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಆದೇಶದಲ್ಲಿ ತಿಳಿಸಿದೆ.
ರಫೇಲ್ ಯುದ್ದ ವಿಮಾನ ಖರೀದಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿ ವಕೀಲ ಎಂ.ಎಲ್ ಶರ್ಮಾ, ವಿನೀತಾ ದಾಂಡ, ಆಪ್ ನಾಯಕ ಸಂಜಯ್ ಸಿಂಗ್ ಮಾಜಿ ಕೇಂದ್ರ ಸಚಿವ ಯಶವಂತ ಸಿನ್ಹಾ, ಅರುಣ್ ಶೌರಿ ಹಾಗೂ ಹಿರಿಯ ವಕೀಲ ಪ್ರಶಾಂತ್ ಭೂಷಣ್ ಅರ್ಜಿ ಸಲ್ಲಿಸಿದ್ದರು. ರಫೇಲ್ ಒಪ್ಪಂದವನ್ನು ರದ್ದುಗೊಳಿಸಿ ಸುಪ್ರೀಂಕೋರ್ಟ್ ಮೇಲುಸ್ತುವಾರಿಯಲ್ಲಿ ಸಿಬಿಐ ತನಿಖೆ ನಡೆಸಬೇಕು ಎಂದು ವಕೀಲರು ಆಗ್ರಹಿಸಿದ್ದರು.
ಈ ಅರ್ಜಿಗಳನ್ನು ಒಟ್ಟಾಗಿಸಿದ್ದ ಮುಖ್ಯ.ನ್ಯಾ ರಂಜನ್ ಗೋಗಯ್ ನೇತೃತ್ವದ ತ್ರಿ ಸದಸ್ಯ ಪೀಠ ಸುದೀರ್ಘ ವಿಚಾರಣೆ ನಡೆಸಿತ್ತು. ನವೆಂಬರ್ 14 ರಂದು ವಿಚಾರಣೆ ಅಂತ್ಯಗೊಳಿಸಿದ್ದ ಸುಪ್ರೀಂಕೋರ್ಟ್ ಇಂದು ಈ ಅರ್ಜಿಯನ್ನು ವಜಾಗೊಳಿಸಿದೆ.